ಗ್ರಾಮೀಣ ಪ್ರದೇಶದ ಕೂಲಿಕಾರರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಒತ್ತುನೀಡಿ, ಆರ್ಥಿಕ ನೆರವು ಪಡೆದು ಬದುಕು ಬದಲಾಯಿಸಿಕೊಳ್ಳಿ ಎಂದು ಸಹಾಯಕ ನಿರ್ದೇಶಕ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗ್ರಾಮೀಣ ಭಾಗದ ಕೂಲಿಕಾರರ ಜೀವನಮಟ್ಟ ಸುಧಾರಿಸುವ ಕಾಮಗಾರಿಗಳು ಮನರೇಗಾ ಯೋಜನೆಯಡಿ ಲಭ್ಯವಿದ್ದು, ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಲಾಭ ಪಡೆಯಿರಿ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳವರೆಗೆ ಕೂಲಿಕಾರರಿಗೆ ಕೆಲಸ ನೀಡುತ್ತೇವೆ. ಉದ್ಯೋಗ ಚೀಟಿ ಪಡೆದ ಕುಟುಂಬಗಳಿಗೆ ವರ್ಷಕ್ಕೆ 100 ದಿನ ಕೆಲಸ ಕೊಡಲಾಗುವುದು. ವಾರ್ಷಿಕವಾಗಿ ಈ ಯೋಜನೆಯಡಿ ₹34,800 ಗಳಿಸಬಹುದು” ಎಂದು ಹೇಳಿದರು.
“ಈ ಯೋಜನೆಯಡಿ ಅರ್ಹ ಫಲಾನುಭವಿಗಳು ದನದಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕೃಷಿಹೊಂಡ ಕಾಮಗಾರಿ ಮಾಡಿಕೊಳ್ಳಲು ಸಾಧ್ಯವಿದೆ. ತೋಟಗಾರಿಕೆ ಇಲಾಖೆ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು” ಎಂದು ಚಂದ್ರಶೇಖರ್ ಬಿದರಕುಂದಿ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಕವಣಾಪುರದಲ್ಲಿ ನ.3ರಂದು ಉಚಿತ ಸಾಮೂಹಿಕ ವಿವಾಹ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದವ್ವ ಪೂಜಾರಿ, ಉಪಾಧ್ಯಕ್ಷೆ ಜ್ಯೋತಿ ಗಾಣಗೇರ, ಸದಸ್ಯ ಸಂತೋಷ ದೊಡ್ಡಮನಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಮ್ಮನ್ನವರ, ತಾಲೂಕ ಪಂಚಾಯತ್ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ತಾಲೂಕು ಪಂಚಾಯತ್ ಐಇಸಿ ಸಂಯೋಜಕ ಮಂಜುನಾಥ ಎಸ್ ಬಿ, ಎಫ್ ಟಿ ಈರಣ್ಣ ದಳವಾಯಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾವಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.
