ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು 380 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ಕಾಲೇಜಿನಲ್ಲಿ ಇರುವುದು ಕೇವಲ ಮೂವರು ಬೋಧಕರು ಮಾತ್ರ. ಭೋದಕ ಸಿಬ್ಬಂದಿಯ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಈ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು 2013ರಲ್ಲಿ ಆರಂಭವಾದಾಗ ಮೂವತ್ತೊಂದು ಬೋಧಕ ಸಿಬ್ಬಂದಿಗಳನ್ನು ಒಳಗೊಂಡಿತ್ತು. ತಾಂತ್ರಿಕ ಶಿಕ್ಷಣ ಇಲಾಖೆಯು ಪ್ರತೀ ವರ್ಷ ಇಲ್ಲಿನ ಬೋಧಕರನ್ನು ವರ್ಗಾವಣೆ ಮಾಡುತ್ತಾ ಬಂದಿದೆ. ಪರಿಣಾಮ, ಈಗ ಕೇವಲ ಮೂವರು ಬೋಧಕರು ಉಳಿದಿದ್ದಾರೆ. ಅದರಲ್ಲಿ ಒಬ್ಬರು ಪ್ರಭಾರಿ ಪ್ರಾಚಾರ್ಯರು, ಇಬ್ಬರು ಬೋಧಕರು. ಇವರೊಂದಿಗೆ, ಸುಮಾರು ಇಪ್ಪತೈದು ಅರೆಕಾಲಿಕ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಐದು ವಿಭಾಗಗಳಿವೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಏಳು ಬೋಧಕ ಸಿಬ್ಬಂದಿ ಪೈಕಿ ಒಬ್ಬರು ಮಾತ್ರವೇ ಇದ್ದು, ಆರು ಹುದ್ದೆಗಳು ಖಾಲಿ ಇವೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ನಾಲ್ಕು ಬೋಧಕ ಸಿಬ್ಬಂದಿ ಪೈಕಿ, ಮೂರು ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಂಟರಲ್ಲಿ ಎಂಟೂ ಹುದ್ದೆಗಳು ಖಾಲಿ ಇವೆ. ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಸೈನ್ಸ್ ವಿಭಾಗದಲ್ಲಿ ಆರಕ್ಕೆ ಆರು ಹುದ್ದೆಗಳೂ ಖಾಲಿ ಉಳಿದಿವೆ.
ಭೋದಕ ಸಿಬ್ಬಂದಿ ಕೊರತೆಯಿಂದ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಾಗಿದೆ. ಇದನ್ನು ತಡೆಯಲು ಅರೆಕಾಲಿಕ ಉಪನ್ಯಾಸಕರು ಪಾಠ ಹಾಗೂ ಪ್ರಯೋಗಾಲಯಗಳನ್ನು ನಡೆಸುತ್ತಿದ್ದಾರೆ.
ಕಾಲೇಜಿನ ಪ್ರಭಾರಿ ಪ್ರಾಂಶುಪಾಲರು ಪ್ರೊ. ಕೃಷ್ಣ ಯರಡೋಣಿ ಮಾತನಾಡಿ, “ಇತ್ತೀಚೆಗೆ ಪ್ರಾಂಶುಪಾಲರು ವರ್ಗವಾಗಿದ್ದರಿಂದ ನಾನು ಪ್ರಭಾರಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ಕಾಲೇಜಿನಲ್ಲಿ ಇಬ್ಬರು ಉಪನ್ಯಾಸಕರು ಮಾತ್ರ ಭೋದಕರಿದ್ದು, ಮೂವತ್ತು ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗದಿರಲಿ ಎಂದು ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ” ಎಂದರು
ಈ ಕುರಿತು ಈದಿನ.ಕಾಮ್ ನೊಂದಿಗೆ ಮಾತನಾಡಿದ ಹೆಸರು ಹೇಳದ ವಿದ್ಯಾರ್ಥಿ, “ಖಾಯಂ ಬೋಧಕರು ಇಲ್ಲದಿರುವುದರಿಂದ ಇತ್ತೀಚೆಗೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಯೋಗ್ಯತೆ ಇದ್ದರೆ ಕಾವೇರಿ ಸಮಸ್ಯೆ ಬಗೆಹರಿಸಿ, ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ನಡೆಯಿರಿ: ಯಡಿಯೂರಪ್ಪ ಗುಡುಗು
ಈದಿನ.ಕಾಮ್ ಜೊತೆ ಮಾತನಾಡಿದ ಎಸ್‌ಎಫ್‌ಐ ಮುಖಂಡ ಚಂದ್ರು ರಾಠೋಡ್, “ಗಜೇಂದ್ರಗಡ ನಗರವು ತಾಲೂಕಾಗಿ ದಿನದಿಂದ ದಿನಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಗರದ ಸುತ್ತಮುತ್ತಲಿನ ಸುಮಾರು ಹಳ್ಳಿಗಳಿಂದ ಡಿಪ್ಲೊಮಾ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಇಲ್ಲಿ ಸರಿಯಾಗಿ ಉಪನ್ಯಾಸಕರೆ ಇಲ್ಲ, ಸರಿಯಾಗಿ ಲ್ಯಾಬ್‌ಗೆ ಬೇಕಾಗಿರುವ ಪ್ರಾಯೋಗಿಕ ಸಾಮಗ್ರಿಗಳು ಇಲ್ಲ, ಲೈಬ್ರರಿಯಲ್ಲಿ ಸರಿಯಾಗಿ ಪುಸ್ತಕಗಳು ಇಲ್ಲ, ಕಾಲೇಜಿನ ಸುಮಾರು 350 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಯಾ ವಿಭಾಗಗಳಿಗೆ HOD ಗಳೆ ಇಲ್ಲ ಹಾಗಾಗಿ ಇಷ್ಟೇಲ್ಲ ಸಮಸ್ಯೆಗಳನ್ನ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ ಅದಷ್ಟು ಬೇಗ ಮಾನ್ಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದನ್ನ ಬಗೆಹರಿಸಲು ಮುಂದಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ SFI ಸಂಘಟನೆ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ ಹೋರಾಟ ಮಾಡಲಾಗುವುದು” ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿಯೇ ನಿರ್ಮಾಣವಾಗಿದ್ದ ಹಾಸ್ಟೇಲ್‌ನಲ್ಲಿ ವಾರ್ಡನ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳೂ ಉಳಿಯುತ್ತಿಲ್ಲ. ಸರಿಯಾದ ನಿರ್ವಹಣೆ ಇಲ್ಲದೆ, ಹಾಸ್ಟೆಲ್ ಸುತ್ತಲು ಮುಳ್ಳುಕಂಟಿ ಬೆಳೆದು ನಿಂತಿದೆ ಪಾಳು ಬಿದ್ದಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.