ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗೋವಿಂದ ಪೈ ಕೊಡುಗೆ ಅಪಾರವಾಗಿದೆ. ಅವರ ಜಯಂತಿಯನ್ನು ಸರ್ಕಾರದ ಪರವಾಗಿ ಆಚರಿಸಬೇಕು ಎಂದು ಕಬ್ಬಿಗರ ಕೂಟದ ಅಧ್ಯಕ್ಷ ಮತ್ತು ನ್ಯಾಯವಾದಿ ಮನೋಹರ್ ಮೆರವಾಡೆ ಒತ್ತಾಯಿಸಿದರು.
ಗದಗ ನಗರದ ಕಬ್ಬಿಗರ ಕೂಟ ಕಚೇರಿಯಲ್ಲಿ ಕಬ್ಬಿಗರ ಕೂಟ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಗೋವಿಂದ ಪೈ ಅವರ 61ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋವಿಂದ ಪೈ ಕನ್ನಡದ ಪ್ರಥಮ ರಾಷ್ಟ್ರಕವಿ. ಏಕೀಕರಣಕ್ಕೆ ಮುಂಚೆ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ದೊರಕಿದೆ. 22 ಭಾಷೆಗಳನ್ನು ಬಲ್ಲವರಾಗಿದ್ದ ‘ಪೈ’ ಕನ್ನಡ ಸಾಹಿತ್ಯಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ, ಅವರ ಜಯಂತಿಯನ್ನು ಸರಕಾರದ ಪರವಾಗಿ ಆಚರಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಹಿರಿಯ ಸಾಹಿತಿ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ .ಎ. ಬಡಿಗೇರ್ ಬಡಿಗೇರ ಮಾತನಾಡಿ, ಗೋವಿಂದ ಪೈ ಅವರ ಜೀವನ ಮತ್ತು ಸಾಹಿತ್ಯದ ಕುರಿತು ಅಭ್ಯಾಸಪೂರ್ಣ ಉಪನ್ಯಾಸ ನಡೆಯಬೇಕು. ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರು ಕನ್ನಡಕ್ಕಾಗಿ ತಮ್ಮ 40 ವರ್ಷಗಳ ಸುಧೀರ್ಘ ಅವಧಿಯನ್ನು ಸವೆಸಿದ್ದು ಗೊಲ್ಲೋದಾ, ವೈಸಾಕಿ, ಗಿಳಿವಿಂಡು ಮುಂತಾದ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಬಿ.ಎಸ್. ಹಿಂಡಿ, ಸಾಮಾಜಿಕ ಹೋರಾಟಗಾರ ರಮೇಶ್ ಸಂಕಣ್ಣನವರ, ನಿವೃತ್ತ ಉಪ ತಹಶಿಲ್ದಾರ್ ಪ್ರತೋ ನಾರಾಯಣಪೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಹಿಮಾನ ಸಾಬ ಮುದ್ದು, ವಿಶ್ವನಾಥ ಹಬೀಬಿ, ರಾಜು ಅರಸಿದ್ಧಿ ಅನೇಕರು ಉಪಸ್ಥಿತರಿದ್ದರು.