ಎಲೆ-ಅಡಿಕೆ ತಿನ್ನಿಸಿ ಅಜ್ಜಿಯೊಬ್ಬಳು ಒಂಬತ್ತು ತಿಂಗಳ ಮೊಮ್ಮಗುವನ್ನು ಕೊಂದಿದ್ದಾರೆ ಎಂಬ ಆರೋಪ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಕೇಳಿಬಂದಿದೆ. ಮಗುವಿನ ತಾಯಿ ತನ್ನ ಅತ್ತೆಯ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ನವೆಂಬರ್ 22ರಂದು ಘಟನೆ ನಡೆದಿದೆ ಎನ್ನಲಾಗಿದೆ. ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ, ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ನಾಗರತ್ನ ಎಂಬವರು ತನ್ನ ಅತ್ತೆ ಸರೋಜಾ ವಿರುದ್ಧ ದೂರು ದಾಖಲಿಸಿದ್ದಾರೆ.
ಮಗು ಜನಿಸಿದ ಐದು ತಿಂಗಳ ಬಳಿಕ ನಾಗರತ್ನ ಅವರು ತನ್ನ ಗಂಡನ ಮನೆಗೆ ಮಗುವಿನೊಂದಿಗೆ ಬಂದಿದ್ದರು. ಆಗ, ‘ಇಷ್ಟು ಬೇಗ ಮಗು ಬೇಕಿತ್ತಾ’ ಅಂತ ಸರೋಜ ಜಗಳ ಮಾಡಿದ್ದರು ಎನ್ನಲಾಗಿದೆ. ಅದೇ ಕೋಮದಲ್ಲಿ ಮಗುವಿಗೆ ಅಡಿಕೆ ಮತ್ತು ಎಲೆ ತಿನ್ನಿಸಿ, ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ನಾಗರತ್ನ ಅವರು ದೂರು ನೀಡಿದ ಬಳಿಕ, ಸಂಸ್ಕಾರ ಮಾಡಲಾಗಿದ್ದ ಮಗುವಿನ ಮೃತದೇಹವನ್ನು ಶುಕ್ರವಾರ ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.