ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತು ಮುಖ್ಯವಾದ ಸಂಪತ್ತಾಗಿದೆ. ನೌಕರರು ತಮ್ಮ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗದಗ ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ (ಮಾ.1) ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ, ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳ ಸಮಾರಂಭವನ್ನು ಕ್ರೀಡಾ ಧ್ವಜಾರೋಹಣಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಸರ್ಕಾರಿ ನೌಕರರು ದಿನನಿತ್ಯ ಕಚೇರಿ ಕೆಲಸ ನಿರ್ವಹಣೆಯಲ್ಲಿನ ಒತ್ತಡವನ್ನು ಕಡಿಮೆಗೊಳಿಸಲು ದಿವಸದ ಒಂದು ಗಂಟೆಯಾದರೂ ವ್ಯಾಯಾಮಕ್ಕಾಗಿಯೇ ಮೀಸಲಿಡಬೇಕು. ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡದಿಂದ ಹೊರಬಂದು ಚೈತನ್ಯದಿಂದ ಕೆಲಸ ನಿರ್ವಹಿಸಲು ಸಹಾಯಕವಾಗುತ್ತದೆ ಎಂದು ನುಡಿದರು.
ಪ್ರಕೃತಿ ವಿಕೋಪದಂತಹ ಕೆಲವು ಸಂದರ್ಭದಲ್ಲಿಯೂ ಸಹ ಸರ್ಕಾರಿ ನೌಕರರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದು ಶ್ಲಾಘನೀಯ ಸಂಗತಿಯಾಗಿದೆ. ಆರೋಗ್ಯವಂತ ನಾಗರಿಕರಿಂದ ಮಾತ್ರ ಆರೋಗ್ಯವಂತ ದೇಶ ನಿರ್ಮಾಣ ಮಾಡಲು ಸಾಧ್ಯ. ಇತ್ತೀಚಿನ ದಿನಮಾನಗಳಲ್ಲಿ ಯುವ ಪೀಳಿಗೆ ಬಿಪಿ, ಮಧುಮೇಹ, ಮಾನಸಿಕ ಒತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿರುವುದು ವಿಷಾಧನೀಯ ಸಂಗತಿ. ಸರ್ಕಾರಿ ನೌಕರರು ಪ್ರತಿನಿತ್ಯ ಯೋಗ, ಕ್ರೀಡೆಯನ್ನು ಹವ್ಯಾಸವಾಗಿಸಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರು.
ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾ ಮನೋಭಾವ ಮೆರೆಯಬೇಕು ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷ ರವಿ ಗುಂಜೀಕರ, ಪಿ.ಎಚ್. ಕಡಿವಾಳ, ಸತೀಶ ಕಟ್ಟಿಮನಿ, ಅಶೋಕ ಹಾದಿ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷರು, ಪದಾದಿಕಾರಿಗಳು, ವಿವಿಧ ಇಲಾಖೆಯ ಕ್ರೀಡಾಪಟುಗಳು ಹಾಜರಿದ್ದರು.
ಡಾ. ವೆಂಕಟೇಶ ಅಲ್ಕೋಡ ಅವರು ನಾಡಗೀತೆ ಪ್ರಸ್ತುತ ಪಡಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಬಿ. ಕೊಣ್ಣೂರ ವಂದಿಸಿದರು. ಎಂ.ಎ. ಯರಗುಡಿ ಕಾರ್ಯಕ್ರಮ ನಿರೂಪಿಸಿದರು.