ಕೆಲವರು ʼಸಂವಿಧಾನ ಬದಲಾಯಿಸುವುದಕ್ಕಾಗಿಯೇ ನಾವು ಬಂದಿದ್ದೇವೆʼ ಎಂದು ಹೇಳುತ್ತಾರೆ. ಪ್ರಸ್ತುತದಲ್ಲಿಯೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇಂತಹ ಶೋಷಣೆಗಳ ವಿರುದ್ದ ದನಿ ಎತ್ತಬೇಕು, ಪ್ರಶ್ನಿಸಬೇಕು, ಪ್ರತಿಭಟಿಸಬೇಕು. ಧೈರ್ಯ ಬರಬೇಕಾದರೆ ಉನ್ನತ ಶಿಕ್ಷಣ ಪಡೆಯಬೇಕು ಎಂದು ಬರಹಗಾರ ಡಾ. ವಿಠ್ಠಲ್ ವಗ್ಗನ್ ಹೇಳಿದರು.
ಗದಗ ಪಟ್ಟಣದ ತೊಂಟದಾರ್ಯ ಕಲ್ಯಾಣ ಮಂಟಪದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ʼ2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರʼ ಕಾರ್ಯಕ್ರಮಲ್ಲಿ ಮಾತನಾಡಿದರು.
“ನಿವೆಲ್ಲರೂ ಎಷ್ಟೇ ಶಿಕ್ಷಣ ಪಡೆದರೂ ತಾಯಿ-ತಂದೆಯನ್ನು ಪ್ರೀತಿಯಿಂದ ಕಾಣಬೇಕು. ಇಲ್ಲದಿದ್ದರೆ ಶಿಕ್ಷಣ ಪಡೆದಿದ್ದು ವ್ಯರ್ಥವಾಗುತ್ತದೆ. ಇದರಿಂದ ತಂದೆ ತಾಯಿಗೆ ಏನೂ ನಷ್ಟವಾಗುವುದಿಲ್ಲ. ಆದರೆ, ನಿಮಗೆ, ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ತಕ್ರಮ ಉದ್ಘಾಟಿಸಿ ಎಫ್ ಎಚ್ ಜಟ್ಟಪ್ಪನವರ ಅವರು ಮಾತನಾಡಿ, “ಶಿಕ್ಷಣದಿಂದ ನಿಮ್ಮ ಬದುಕನ್ನು ಹೊಸದಾಗಿ ರೂಪಿಸಿಕೊಳ್ಳಬೇಕು. ಬಿ ಆರ್ ಅಂಬೇಡ್ಕರ್ ಅವರ ಓದಿನ ಹವ್ಯಾಸ ಎಷ್ಟಿತ್ತೆಂದರೆ ದಿನದ ಹದಿನೆಂಟು ಗಂಟೆಗಳು ಓದುತ್ತಿದ್ದರು. ಈ ಪ್ರೇರಣೆ ನಿಮ್ಮಲ್ಲಿ ಬರಬೇಕು. ಪಠ್ಯ ಪುಸ್ತಕಕ್ಕೆ ಸಿಮೀತವಾಗದೇ ಪಠ್ಯೇತರ ಪುಸ್ತಕಗಳನ್ನು ಓದಿನ ಹವ್ಯಾಸ ಮಾಡಿಕೊಳ್ಳಬೇಕು. ಆಗ ಪ್ರಪಂಚ, ದೇಶ, ನಮ್ಮೂರು ನಮ್ಮ ಸುತ್ತ ಮುತ್ತಲಿರುವ ಸಮಾಜವನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

“ದೇವರ ದೃಷ್ಟಿಯಲ್ಲಿ ಸಮಾನರಲ್ಲ. ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರೆಂದು ಅಂಬೇಡ್ಕರ್ ಹೇಳಿದ್ದಾರೆ. ಆದರೆ ಇಷ್ಟು ವರ್ಷಗಳವರೆಗೂ ಕೂಡ ಎಷ್ಟೋ ಕುಟುಂಬಗಳಿಗೆ ಮನೆಗಳಿಲ್ಲ, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ, ಆಳುವ ವರ್ಗದವರ ಗುಲಾಮರಾಗಿ ಬದುಕುವ ಸ್ಥಿತಿ ಇದೆ. ಇದನ್ನು ಹೊಡೆದೋಡಿಸಬೇಕಾದರೆ ಪ್ರತಿಯೊಬ್ಬರೂ ಕೂಡ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು” ಎಂದು ಜಟ್ಟಪ್ಪನವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“ಉನ್ನತ ಮಟ್ಟಕ್ಕೆ ಬೆಳೆದಿರುವ ಪ್ರತಿಯೊಬ್ಬರೂ ಹಳ್ಳಿಯಿಂದ ಬಂದವರೆ. ಬಡವರ ಹೊಟ್ಟೆಯಲ್ಲಿಯೇ ಹುಟ್ಟಿದವರು. ಅಂತಹವರ ಚೈತನ್ಯ ನಿಮ್ಮೊಳಗೂ ಚಿಗುರಿ ಹೆಮ್ಮೆರವಾಗಲಿ” ಎಂದು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಭಾರತದ ರೈತ, ಕಾರ್ಮಿಕ, ಜನಸಾಮಾನ್ಯರ ಬದುಕು ಶೋಚನೀಯವಾಗಿದೆ: ಕೆ ರಾಧಾಕೃಷ್ಣ
“ಭಾರತ ದೇಶ ಬಹುತ್ವತೆಯಿಂದ ಕೂಡಿದ್ದು, ಇಲ್ಲಿ ಎಲ್ಲ ಧರ್ಮದವರೂ ಕೂಡಿ ಬದುಕುತ್ತಿದ್ದಾರೆ. ಆದರೆ, ಅಂತಹ ಬಹುತ್ವವನ್ನು ಹಾಳು ಮಾಡಲು ಹೊರಟಿದ್ದಾರೆ. ಅವರಿಂದ ರಕ್ಷಸಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ” ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎನ್ ಎಚ್ ಕೋನರೆಡ್ಡಿ, ಮಾರುತಿ ದೊಡ್ಡಮನಿ, ರವೀಂದ್ರ ಕಲ್ಯಾಣಿ, ಸಂಘಟನೆಯ ಮುಖಂಡರುಗಳಾದ ಶರೀಫ್ ಬಿಳಿಯಲಿ, ಮುತ್ತು ಬಿಳಿಯಲಿ, ಆನಂದ ಶಿಂಗಾಡಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಇದ್ದರು.