ದೇಶದ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜಸ್ತಾನದ ನಾಗೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಜೈಭೀಮ್ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ ಆಗ್ರಹಿಸಿದರು.
ಸಂವಿಧಾನ ತಿದ್ದುಪಡಿ ಬಗ್ಗೆ ಹೇಳಿಕೆ ನೀಡಿದ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೈ ಭೀಮ್ ಸೇನಾ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಗುರುವಾರ (ಏ.4) ಗದಗ ನಗರದ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಜ್ಯೋತಿ ಅವರು ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಹುಮತ ಬೇಕು ಎಂಬುದು ಅವರ ಆಲೋಚನೆಯಾಗಿದೆ ಎಂದು ಅವರು ಆರೋಪ ಮಾಡಿದರು.
ಇತ್ತೀಚೆಗೆ ಬಿಜೆಪಿಯ ಹಲವು ನಾಯಕರು ಸಂವಿಧಾನ ತಿದ್ದುಪಡಿ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. 2000 ವರ್ಷದಲ್ಲಿ ಹಲವರು ನಡೆಸಿದ ದೇಶವ್ಯಾಪಿ ಹೋರಾಟದಿಂದ ತೆಪ್ಪಗಾಗಿದ್ದ ಬಿಜೆಪಿಯವರು, ಈಗ ಮತ್ತೇ ಆ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. 10 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಸಂವಿಧಾನದ ಆಶಯಗಳು ಗಾಳಿಯಲ್ಲಿ ತೂರಿಹೋಗಿವೆ. ಸಂವಿಧಾನ ವಿರೋಧಿ ಚಟುವಟಿಕೆ ನಡೆಸುವವ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಗದಗ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಲ್ಲಿಸಿದರು.
ಜೈಭೀಮ್ ಸೇನೆ ಗೌರವ ಅಧ್ಯಕ್ಷ ವಿಜಯ್ ಕಲ್ಮನಿ, ಅಂಜುಮನ್ ಕಮಿಟಿ ಅಧ್ಯಕ್ಷ ಯೂಸುಫ್ ನಮಾಜಿ, ಜೈಭೀಮ್ ಸಂಘಟನೆ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಮನಗಾಪೂರ, ತಾಲೂಕು ಅಧ್ಯಕ್ಷ ಹನುಮಂತ ಪೂಜಾರ, ಸೋಮು ನಾಗರಾಜ್, ಮಾರುತಿ ಹಾದಿಮನಿ, ಬಸವರಾಜ್ ಮನಗುಂಡಿ, ವಿಶಾಲ್, ರಫಿಕ್ ಜಮಾಲಖಾನ್, ಮಹಾಂತೇಶ್ ಬೆಳಧಡಿ, ಹನುಮಂತ ರಾಂಪೂರ, ಯುವರಾಜ್ ಹಾದಿಮನಿ, ಶ್ರೀಕಾಂತ್ ಮೂಲಿಮನಿ, ಮಂಜುನಾಥ ಹಳ್ಳದಮನಿ, ರವಿ ಹಳ್ಳದಮನಿ, ಗಂಗಾಧರ್ ಬ್ಯಾಗೋಟಿ, ಈರಣ್ಣ ಗೆಜ್ಜಿಹಳ್ಳಿ, ರಾಘವೇಂದ್ರ ಗೆಜ್ಜೆಹಳ್ಳಿ, ಮಂಜುನಾಥ ಅಗಸಿಮನಿ, ಅಶೊಇಕ ಹಾದಿಮನಿ, ಮಹಾದೇವ ಛಲವಾದಿ, ಮೋಹನ್ ಛಲವಾದಿ, ಮಂಜುನಾಥ ಕೊರಗಲ್, ಬಸವರಾಜ್, ದುರಗಪ್ಪ ಮಾದರ ಇದ್ದರು.
