ನಾವು ಈಗ 78ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಆದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ ಎಂದು ಯೋಚಿಸಿದರೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಎಚ್ ಪೂಜಾರ್ ಹೇಳಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ʼನಮ್ಮ ಕರ್ನಾಟಕ ರಕ್ಷಣಾ ವೇದಿಕೆʼಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿದೆ. ಆದರೆ ನಮ್ಮ ಹಕ್ಕುಗಳಿಗಾಗಿ ಇನ್ನೂ ಹೋರಾಟ ಮಾಡುತ್ತ ಬಂದಿದ್ದೇವೆ. ಇದು ವಿಪರ್ಯಾಸ ಸಂಗತಿ” ಎಂದರು.
ಅತಿಥಿಯಾಗಿ ಆಗಮಿಸಿದ್ದ ಸಾರ್ವಜನಿಕರ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ್ ನವಲಗುಂದ ಮಾತನಾಡಿ, “ಅನೇಕ ತ್ಯಾಗ ಬಲಿದಾನಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈಗಿನ ವಾಸ್ತವ್ಯದ ಸಂದರ್ಭದಲ್ಲಿ ನೋಡಿದರೆ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ ಎಂದು ಆಲೋಚಿಸಬೇಕಿದೆ. ಶೋಷಿತ ಸಮುದಾಯಗಳು ಇಂದಿಗೂ ಸ್ವಾತಂತ್ರ್ಯ ಪಡೆದುಕೊಂಡಿಲ್ಲ. ಇವತ್ತಿಗೂ ಅವರು ಸ್ವಂತ ಬದುಕು ಕಟ್ಟಿಕೊಳ್ಳದ ಕೆಳಮಟ್ಟದಲ್ಲಿ ಬದಕುತ್ತಿದ್ದಾರೆ. ಈ ಸಮಾಜದಲ್ಲಿ ಯಾವುದೇ ಸಮುದಾಯ ಇರಲಿ, ಎಲ್ಲರೂ ಸಮಾನರು. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಶೋಷಿತ ಸಮುದಾಯಗಳು ಮುನ್ನೆಲೆಗೆ ಬಂದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ” ಎಂದು ಅಭಿಪ್ರಾಯಪಟ್ಟರು. ಜತೆಗೆ ಮುಂಡರಗಿ ತಾಲೂಕಿನ ಅಭಿವೃದ್ಧಿ ಹಿನ್ನೆಡೆ ಕುರಿತು, ಸಮಗ್ರವಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭೋವಿ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರ ನರೇಗಲ್ ಅವರು ಸ್ವಾತಂತ್ರ್ಯ ಹೋರಾಟಗಾರರು ನಡೆದುಬಂದ ಹಾದಿ ಬಗ್ಗೆ, ಪ್ರಜಾಪ್ರಭುತ್ವದ ಕರ್ತವ್ಯದ ಬಗ್ಗೆ, ಸಮಗ್ರ ಆಡಳಿತದ ಸುಧಾರಣೆ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಜಂತ್ಲಿ-ಶಿರೂರದ ಪ್ರಸಿದ್ಧ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ ಲೇಖಕರ ಪುಸ್ತಕಗಳನ್ನು ಖರೀದಿಸುವಂತೆ ಲೇಖಕರ ವೇದಿಕೆಯಿಂದ ಮನವಿ
ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ಅಲೆಮಾರಿ ಗೋಂದಳಿ ಸಮಾಜದ ಅಧ್ಯಕ್ಷ ವಿಠ್ಠಲ್ ಗಣಾಚಾರಿ, ಮೌಲಾನ್ ಆಜ಼ಾದ್ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಇಸ್ಮಾಯಿಲ್ ನಮಾಜಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗವಿಸಿದ್ದಪ್ಪ ಹ್ಯಾಟಿ, ಹಿರಿಯ ದಲಿತ ಹೋರಾಟಗಾರ ಹನುಮಂತ ಪೂಜಾರ, ಉಮೇಶ್ ಕಲಾಲ್ ಹಾಗೂ ಮುಂಡರಗಿ ತಾಲೂಕಿನ ಸಮಸ್ತ ಗುರು ಹಿರಿಯರು ಇದ್ದರು.