ರಾಜ್ಯ ಸರ್ಕಾರ ಈಗಾಗಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಆದರೆ, ಈವರೆಗೆ ರೈತರಿಗೆ ಯಾವುದೇ ಪರಿಹಾರ ಬಂದಿಲ್ಲ. ಪ್ರತಿ ಎಕರೆಗೆ 15,000 ರೂಪಾಯಿಯಂತೆ ಕೂಡಲೇ ಪರಿಹಾರ ಘೋಷಿಸಬೇಕು ಎಂದು ಕೃಷಿಕ ಸಮಾಜದ ಕಾರ್ಯಕರ್ತರು ಒತ್ತಾಯಿಸಿದರು.
ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ಜಿಲ್ಲೆಗೆ ತೆರಳಿದ್ದ ವೇಳೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
“ಸದ್ಯ ಜಿಲ್ಲೆಯಲ್ಲಿ ಸಂಪೂರ್ಣ ಮಳೆ ಕೊರತೆ ಎದುರಿಸುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತಿದ್ದ ಹೆಸರು, ಶೇಂಗಾ, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಗಿಡಿಗಳು ಸಂಪೂರ್ಣ ಒಣಗಿ ಹೋಗಿದ್ದು, ರೈತ ತುಂಬಾ ನಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಕೇವಲ ಹೆಸರು ಬೆಳೆಗೆ ಮಾತ್ರ ಮಧ್ಯಂತರ ಬೆಳೆ ಪರಿಹಾರ ಒದಗಿಸುತ್ತಿದ್ದು, ಉಳಿದ ಬೆಳೆಗಳಿಗೂ ಮಧ್ಯಂತರ ಪರಿಹಾರ ಒದಗಿಸಬೇಕು. ಹೆಸರು ಬೆಳೆಗೆ ಇನ್ನೂ 15 ಕೋಟಿ ರೂಪಾಯಿ ವಿಮೆ ಬರಬೇಕಾಗಿದ್ದು, ಕೂಡಲೇ ಬಾಕಿ ಹಣ ಪಾವತಿಸಬೇಕು” ಎಂದು ಆಗ್ರಹಿಸಿದರು.
ಕೃಷಿ ಭೂಮಿ ಹೊಂದಿದ ರೈತರಿಗೆ ‘ಜೋಡೆತ್ತು ಭಾಗ್ಯ’
“ಕೃಷಿ ಭೂಮಿ ಹೊಂದಿದ ರೈತರಿಗೆ ಪ್ರತಿ ಗ್ರಾಮ ಪಂಚಾತಿತಿ ವ್ಯಾಪ್ತಿಯಲ್ಲಿ ಸುಮಾರು 20 ಜೊತೆ ಎತ್ತುಗಳನ್ನು ಕೊಳ್ಳಲು ರೈತರಿಗೆ ಸಹಾಯಧನ ನೀಡಿ ರೈತರ ಕಷ್ಟಕ್ಕೆ ನೆರವಾಗಬೇಕು” ಎಂದು ಒತ್ತಾಯಿಸಿದರು.
ಡಿಸೆಂಬರ್ 23ರ ರೈತ ದಿನಾಚರಣೆ
“ಈಗಾಗಲೇ ಡಿಸೆಂಬರ್ 23ರಂದು ರೈತ ದಿನಾಚರಣೆಯನ್ನು ಆಚರಿಸುತ್ತಿದ್ದು, ಬೇರೆ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಹೀಗಾಗಿ ಈ ವರ್ಷ ಡಿಸೆಂಬರ 23 ರೈತ ಜಯಂತಿಯನ್ನು ಘೋಷಣೆ ಮಾಡಿ ಸರ್ಕಾರ ವಿವಿಧ ಇಲಾಖೆಗಳಲ್ಲಿ ಅದ್ಧೂರಿಯಾಗಿ ಆಚರಿಸಲು ಆದೇಶ ಹೊರಡಿಸಬೇಕು” ಎಂದರು.
ಮೇವು ಬ್ಯಾಂಕ್ ಸ್ಥಾಪನೆ : ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಇದ್ದಿದ್ದರಿಂದ ದನಗಳಿಗೆ ಮೇವಿನ ಅಧಾರವಿಲ್ಲ. ಕೂಡಲೇ ಸರ್ಕಾರ ರೈತರಿಗೆ ಉಚಿತವಾಗಿ ಮೇವು ಪೂರೈಕೆ ಮಾಡಿ ರೈತರ ಹಿತ ಕಾಪಾಡಬೇಕು. ಬರಗಾಲ ಉಂಟಾಗಿರುವುದರಿಂದ ಬೆಳೆಸಾಲ ಪಡೆದು ತೀರಿಸಲಾಗದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದು, ರೈತರು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು” ಎಂದು ಆಗ್ರಹಿಸಿದರು.
“ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಟಾನ್ಸ್‌ಫಾರ್ಮರ್ ವಿದ್ಯುತ್ ರದ್ದು ಆದೇಶ ಹಿಂಪಡೆಯಬೇಕು. ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗೆ ವಿದ್ಯುತ್ ಒದಗಿಸಲು ರೈತರು ಅರ್ಜಿ ಸಲ್ಲಿಸಿವೆ. ಆದರೆ, ಹೆಸ್ಕಾಂಗಳು ಅನುದಾನ ಕೊರತೆ ಕಾರಣ ಹೇಳಿ ಸಂಪರ್ಕ ಒದಗಿಸಿಲ್ಲ. ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬ ಇತರ ವೆಚ್ಚ ಭರಿಸುವಂತೆ ಆದೇಶ ಹೊರಡಿಸಿದ್ದು, ಪ್ರತಿ ಕೊಳವೆಬಾವಿ ಸಂಪರ್ಕಕ್ಕೆ ಸುಮಾರು 2 ಲಕ್ಷ ಖರ್ಚಾಗುತ್ತಿದೆ. ಇದನ್ನು ಭರಿಸುವುದು ರೈತರಿಗೆ ಅಸಾಧ್ಯವಾಗಿದೆ. ಹಿಂದಿನ ಆದೇಶದಂತೆ ಸುಮಾರು ₹24,000 (ಇಎಂಡಿ) ಹಣ ಕಟ್ಟಿಸಿಕೊಂಡು ವಿದ್ಯುತ್ ಸಂಪರ್ಕ ನೀಡುವುದನ್ನು ಮುಂದುವರೆಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಜಿಮ್ಸ್ ನಿರ್ದೇಶಕರ ಅಮಾನತಿಗೆ ಸುರೇಶ ಚಲವಾದಿ ಆಗ್ರಹ
ಕಳೆದ ಚುನಾವಣಾ ವರ್ಷದಲ್ಲಿ ನಿರ್ಮಿಸಿದ ರಸ್ತೆಗಳು ಕೆಲವೇ ದಿನಗಳಲ್ಲಿ, ಹಾಳಾಗಿದ್ದು, ಇದರಿಂದ ಜನರಿಗೆ ತುಂಬಾ ತೊಂದರೆ ಆಗಿರುತ್ತದೆ. ಹಾಗಾಗಿ ರಸ್ತೆ ನಿರ್ಮಾಣದ ಗುತ್ತಿಗೆದಾರರಿಗೆ ಕೂಡಲೇ ರಸ್ತೆ ರಿಪೇರಿ ಮಾಡುವಂತೆ ತಿಳಿಸಬೇಕು ಹಾಗೂ ಕಳಪೆ ರಸ್ತೆ ನಿರ್ಮಾಣರ ಗುತ್ತಿಗೆದಾರರ ಪರವಾನಗಿ ರದ್ದು ಮಾಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಬಸವರಾಜ ಸಜ್ಜನ ಸೇರಿದಂತೆ ಕೃಷಿಕ ಸಮಾಜದ ಹಲವು ಮಂದಿ ಕಾರ್ಯಕರ್ತರು ಇದ್ದರು.