ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದೆ. ಆದರೆ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ದಿನ ನಿತ್ಯ ಸಂಕಷ್ಟ ಎದುರಿಸುತ್ತಿದ್ದರೂ ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಡಿ ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದು, ಅಭ್ಯಾಸ ಮಾಡಲು ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.
ವಸತಿ ನಿಲಯದ ಕೊಠಡಿಗಳ ಬಾಗಿಲು, ಕದಗಳು ಹಾಳಾಗಿವೆ, ಕಿಟಕಿ ಸರಿಯಾಗಿ ಇಲ್ಲ. ರಾತ್ರಿಹೊತ್ತು ಒಡೆದ ಕಿಟಕಿಗಳ ಮೂಲಕ ಸೊಳ್ಳೆಗಳು ನುಸುಳಿ ಇನ್ನಿಲ್ಲದಂತೆ ಸಮಸ್ಯೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಕೊಠಡಿಗಲ್ಲಿ ಫ್ಯಾನ್ ಕೂಡ ಇಲ್ಲ. ಕೆಲವು ಕಡೆ ಇದ್ದರೂ ಸರಿಯಾಗಿ ಕೆಲಸ ಮಾಡಲ್ಲ. ಎಲ್ಲ ಕೊಠಡಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ವಯರಿಂಗ್ ಸರಿಯಾಗಿ ಮಾಡದೆ ಹಾಗೆಯೇ ಬಿಟ್ಟಿದ್ದು, ವಿದ್ಯಾರ್ಥಿಗಳ ಜೀವದ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ವಸತಿ ನಿಲಯ ಕೊಠಡಿಗಳು ಶಿಥಿಲೀಕರಣಗೊಂಡಿವೆ. ಅಲ್ಲಲ್ಲಿ ಬಿರುಕು ಬಿಟ್ಟಿವೆ. ಸುಮಾರು ವರ್ಷಗಳಿಂದ ಮಳೆಗಾಲ ಬಂದರೆ ಕೊಠಡಿಗಳು ಸೋರುತ್ತಿವೆ. ಇದರಿಂದ ವಿದ್ಯಾರ್ಥಿಗಳು ದಿನನಿತ್ಯ ಮಲಗಿಕೊಳ್ಳಲು, ಅಭ್ಯಾಸ ಮಾಡಲು ಸಮಸ್ಯೆ ಆಗುತ್ತಿದೆ. ವಸತಿ ನಿಲಯದ ಮುಂದೆ ಮಳೆ ನೀರು ನಿಲ್ಲುತ್ತಿದೆ. ವಿದ್ಯಾರ್ಥಿಗಳಿಗೆ ಓಡಾಡಲು ಕನಿಷ್ಠ ರಸ್ತೆಯೂ ಇಲ್ಲದೆ ತೊಂದರೆಯಾಗುತ್ತಿದೆ. ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.
ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳು ಬಟ್ಟೆ ತೊಳೆಯಲು, ಸ್ನಾನ ಮಾಡಲು ನೀರಿಲ್ಲ. ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ವಿದ್ಯಾರ್ಥಿಗಳು ದಿನ ದೂಡುತ್ತಿದ್ದಾರೆ. ಅಷ್ಟೇ ಅಲ್ಲದೇ ವಸತಿ ನಿಲಯದಲ್ಲಿ ಕಾಟ್, ಪೆನ್ನು ಪುಸ್ತಕ, ಶೂ ಸಾಕ್ಸ್, ಶೌಚಾಲಯ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಕಲಿಕೆಯೂ ಆಮೆಗತಿಯಲ್ಲಿ ಸಾಗಿದೆ. ಪರಿಸ್ಥಿತಿ ಹೀಗಿದ್ದರೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ವಸತಿ ನಿಲಯದ ಕಡೆಗೆ ಮುಖ ಮಾಡಿಲ್ಲ ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಈದಿನ.ಕಾಮ್ ಜೊತೆಗೆ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ವಿದ್ಯಾರ್ಥಿಗಳ ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳು ಕಾಲ ಗತಿಸಿದರೂ ವಿದ್ಯಾರ್ಥಿಗಳಿಗೆ ಪೆನ್ನು ಪುಸ್ತಕ ಕೊಟ್ಟಿಲ್ಲ. ದಿನ ಬಳಕೆಗೆ ನೀರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ತರಹ ಸಾಕಷ್ಟು ವಸತಿ ನಿಲಯಗಳು ದುರಸ್ತಿ ಹಂತದಲ್ಲಿವೆ. ಆದಷ್ಟು ಬೇಗ ಅವುಗಳನ್ನು ಪರಿಶೀಲಿಸಿ ದುರಸ್ತಿಗೊಳಿಸಬೇಕು, ವಿದ್ಯಾರ್ಥಿಗಳ ಸಂಖ್ಯೆಗಳ ಅನುಗುಣವಾಗಿ ಹಾಗೂ ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಸತಿ ನಿಲಯ ಕಲ್ಪಿಸಬೇಕು. ಎಲ್ಲಾ ಸಮಸ್ಯೆಗಳನ್ನೂ ಅಧಿಕಾರಿಗಳು ಒಂದು ವಾರದಲ್ಲಿ ಸರಿಡಿಸಲು ಮುಂದಾಗಬೇಕು” ಎಂದು ಆಗ್ರಹಿಸಿದರು.

“ವಿದ್ಯಾರ್ಥಿಗಳ ಜೀವಕ್ಕೆ ಹೆಚ್ಚು ಕಡಿಮೆ ಆದರೆ ನೇರವಾಗಿ ನೀವೇ ಹೊಣೆಗಾರರು. ಮುಂದಿನ ಒಂದು ವಾರದಲ್ಲಿ ಸರಿಪಡಿಸಲು ಮುಂದಾಗದೆ ಇದ್ದರೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಅನಿಲ್ ಆರ್ ಮಾತನಾಡಿ, “ಈ ಕುರಿತು ಎಸ್.ಎಫ್.ಐ ವತಿಯಿಂದ ತಾಲೂಕು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಎಲ್ಲಾ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಗದಗ | ರಮೇಶ್ ಬೂದಿಹಾಳಗೆ ಸಿಎಂ ಸನ್ಮಾನ

ರಾಜ್ಯದಲ್ಲಿ ಹೀಗೆ ಮೂಲಸೌಕರ್ಯಗಳಿಲ್ಲದ ಎಷ್ಟೋ ಸರ್ಕಾರಿ ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ಖಾಸಗಿ ಸಂಸ್ಥೆಗಳತ್ತ ಪೋಷಕರು ಮುಖ ಮಾಡಲು ಇದೂ ಮುಖ್ಯ ಕಾರಣವಾಗಿದೆ. ಸಂಬಂಧಪಟ್ಟ ಸ್ಥಳೀಯ ಆಡಳಿತ, ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಎಲ್ಲ ವಸತಿ ನಿಲಯಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರ ಅಗತ್ಯವಿರುವಷ್ಟು ಅನುದಾನವನ್ನು ಸಕಾಲಕ್ಕೆ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುವು ಮಾಡಿಕೊಡಬೇಕು ಎನ್ನುವುದು ಬಡ ಪೋಷಕರ ಹಾಗೂ ವಿದ್ಯಾರ್ಥಿಗಳ ಮನವಿ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.