ಸುಸಜ್ಜಿತ ಕಟ್ಟಡ, ಮೂಲಸೌಕರ್ಯಗಳ ಜತೆಗೆ ಉತ್ತಮ ಶಿಕ್ಷಣ ಸಿಗುತ್ತದೆಂಬ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಸಿ ಮೊರಾರ್ಜಿ ದೇಸಾಯಿ ಶಾಲೆಗೆ ಸೇರಿಸುತ್ತಾರೆ. ಆದರೆ ಇಲ್ಲೊಂದು ಮೊರಾರ್ಜಿ ವಸತಿ ಶಾಲೆಯಲ್ಲಿ ಮೂಲಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಸುಮಾರು 250 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಹಲವು ರೀತಿಯ ಮೂಲಸೌಕರ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಭ್ಯಾಸ ಮಾಡಲು ಸಮಸ್ಯೆಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.
ಬಾಲಕರ ವಸತಿ ನಿಲಯದ ಕಟ್ಟಡ ಕಳಪೆ ಕಾಮಗಾರಿ ಹೊಂದಿದ್ದು, ಬಿರುಕು ಬಿಟ್ಟಿದೆ. ಕಟ್ಟಡವನ್ನು ಸರಿಯಾಗಿ ಕ್ಯೂರಿಂಗ್ ಮಾಡದೇ ಇರುವುದರಿಂದ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಸಿಮೆಂಟ್ ಕಿತ್ತು ಹೋಗಿದೆ. ಇಡೀ ಶಾಲೆ ಹಾಗೂ ವಸತಿ ನಿಲಯಯಗಳ ಕಟ್ಟಡಕ್ಕೆ ಸುಣ್ಣ ಬಣ್ಣ ಇಲ್ಲದೆ ಕಳೆ ಕೆಳೆದುಕೊಂಡಿದೆ. ಶಾಲೆಯ ಸುತ್ತಲೂ ಕಾಂಪೌಂಡ್ ಇಲ್ಲದೆ ಇರುವುದರಿಂದ ದನಕರುಗಳು ಶಾಲೆಯ ಒಳಗೆ ನುಗ್ಗುತ್ತಿವೆ.

ವಸತಿ ನಿಲಯದ ಪ್ರತಿಯೊಂದು ಕೊಠಡಿಗಳ ಕಿಟಕಿಗಳು ಕಿತ್ತುಬಂದಿವೆ. ಕಿಟಕಿ ಗಾಜುಗಳು ಒಡೆದಿವೆ. ಮಳೆಯಾದರೆ ಮಳೆ ನೀರು ಕೊಠಡಿಗಳ ಒಳಗೆ ಬರುತ್ತದೆ. ರಾತ್ರಿ ಸಮಯದಲ್ಲಿ ಕಿಟಕಿಗಳ ಮೂಲಕ ಸೊಳ್ಳೆಗಳು ಕೊಠಡಿಗಳಲ್ಲಿ ಜಾಸ್ತಿ ಬರುವುದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಕಿಟಕಿ ಒಡೆದಿರುವುದರಿಂದ ರಾತ್ರಿಯಿಡಿ ತಣ್ಣನೆಯ ಗಾಳಿ ಬೀಸುವುದರಿಂದ ಚಳಿಹತ್ತಿ ನಡುಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ವಿದ್ಯಾರ್ಥಿಗಳು. ಕೊಠಡಿಗಳಲ್ಲಿ ಫ್ಯಾನುಗಳೇ ಇಲ್ಲ. ಕೆಲವು ಕಡೆ ಇದ್ದರೂ ಫ್ಯಾನುಗಳು ತಿರುಗುತ್ತಿಲ್ಲ. ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ವಸತಿ ನಿಲಯ ಕೊಠಡಿಗಳಲ್ಲಿ ವಿದ್ಯುತ್ ವೈಯರಿಂಗ್ ಸರಿಯಾಗಿ ಮಾಡದೆ ಹಾಗೆಯೇ ಬಿಟ್ಟಿದ್ದು, ವಿದ್ಯಾರ್ಥಿಗಳ ಜೀವದ ಜತೆಗೆ ಆಟ ಆಡುತ್ತಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಬಳಸಲಿಕ್ಕೆ ನೀರು ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸ್ನಾನ ಮಾಡದ ಪರಿಸ್ಥಿತಿ ಉಂಟಾಗಿದೆ. ನೀರು ಇಲ್ಲದೇ ಇರುವುದರಿಂದ ಶೌಚಾಲಯಗಳು ಗಬ್ಬು ನಾರುತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಸುಮಾರು ವರ್ಷಗಳೇ ಆಗಿವೆ.
ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಊಟ ಮಾಡಲು ಊಟದ ಹಾಲ್‌ಗೆ ಬಂದರೆ, ಸರಿಯಾಗಿ ಕುಳಿತು ಊಟ ಮಾಡಲು ಡೈನಿಂಗ್ ಟೇಬಲ್ ಇಲ್ಲದೆ, ನೆಲದ ಮೇಲೆ ಕುಳಿತು ಊಟ ಮಾಡುತ್ತಾರೆ. ಶಾಲೆಯ ಆವರಣದ ರಸ್ತೆ ಡಾಂಬರ್ ಇಲ್ಲದೆ ಹಾಳಾಗಿದೆ. ವಿಶಾಲವಾದ ಆಟದ ಮೈದಾನ ಇದ್ದರೂ ಇಲ್ಲದಂತಾಗಿದೆ. ಮೈದಾನದ ತುಂಬೆಲ್ಲಾ ಮುಳ್ಳುಗಿಡಗಳು ಬೆಳೆದಿವೆ. ಇದರಿಂದ ಮಕ್ಕಳಿಗೆ ಆಟ ಆಡಲು ಜಾಗವಿದ್ದರೂ ಇಲ್ಲದಂತಾಗಿದೆ.

ಸ್ಮಾರ್ಟ್ ಕ್ಲಾಸ್ : ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆಗೆ ಸ್ಮಾರ್ಟ್ ಕ್ಲಾಸ್ ಅವಶ್ಯಕತೆಯಿದೆ. ಹಾಗಾಗಿ ನಮಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಬೇಕೆಂಬುದು ವಿದ್ಯಾರ್ಥಿಗಳ ಕೋರಿಕೆಯಾಗಿದೆ.
ಈ ಕುರಿತು ವಸತಿ ನಿಲಯದ ವಿದ್ಯಾರ್ಥಿಯೊಬ್ಬರ ಪಾಲಕ ಗುರುನಾಥ ಕೆಂಗಾರಕರ ಮಾತನಾಡಿ, “ವಸತಿ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತವೆ. ಕಿಟಕಿಗಳು ಒಡೆದಿವೆ, ನೀರಿನ ವ್ಯವಸ್ಥೆ ಸರಿಯಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಮಂಚಗಳ ವ್ಯವಸ್ಥೆ ಇಲ್ಲ. ಹೊದಿಕೆಗಳಿಲ್ಲ. ಆಟದ ಮೈದಾನ ಇದ್ದರೂ ಇಲ್ಲದಾಗಿದೆ. ಇವೆಲ್ಲವನ್ನೂ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ಶ್ರೀನಿವಾಸಪುರ | ಮಾವು ಬೆಳೆಗೆ ಬೆಂಬಲ ಬೆಲೆ ನೀಡದಿದ್ದರೆ ವಿಧಾನಸೌಧದ ಮುಂದೆ ಉಗ್ರ ಹೋರಾಟ: ಚಿನ್ನಪ್ಪ ರೆಡ್ಡಿ
ಡಿಎಸ್‌ಎಸ್ ತಾಲೂಕು ಅಧ್ಯಕ್ಷ ದತ್ತು ಜೋಗನ್ನವರ ಮಾತನಾಡಿ, “ಈ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳದ್ದೇ ಅಧಿಕ ಸಮಸ್ಯೆ ಕಂಡುಬರುತ್ತಿದೆ. ಸರಿಯಾದ ರಸ್ತೆ ಇಲ್ಲ, ವಿದ್ಯಾರ್ಥಿಗಳಿಗೆ ಆಟವಾಡಲು ಮೈದಾನವಿಲ್ಲ. ಕಟ್ಟಡ ಬಿರುಕು ಬಿಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೆಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಇಲ್ಲಿಯ ಸಮಸ್ಯೆಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಶಾಲೆಯ ಮುಂಭಾಗದ ಎದುರಿಗೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಗುವುದು” ಎಂದು ಎಚ್ಚರಿಕೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ರೂಪ ನಾಯ್ಡು ಮಾತನಾಡಿ, “ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದ್ದು, ಕೆಲವೊಂದಷ್ಟು ಸಮಸ್ಯೆಗಳಿವೆ. ಅಧಿಕಾರಿಗಳ ಗಮನಕ್ಕೆ ತರುತ್ತೇನೆ” ಎಂದು ಭರವಸೆ ನೀಡಿದರು.


ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.