ಗದಗ ಜಿಲ್ಲೆಯ ಗಜೇಂದ್ರಗಡದ ಸುತ್ತಮುತ್ತ ಚಿರತೆ ಪದೇ ಪದೆ ಕಾಣಿಸಿಕೊಳ್ಳುತ್ತಿದ್ದು, 15 ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದು, ಆಗಾಗ ಹಳ್ಳಿಗಳಿಗೆ ಬರುವ ಚಿರತೆ ನಾಯಿ, ಕುರಿ, ಕೋಳಿಗಳ ಮೇಲೆ ದಾಳಿ ಮಾಡುತ್ತಿದೆ. ಗ್ರಾಮಸ್ಥರು ಒಬ್ಬೊಬ್ಬರಾಗಿ ಓಡಾಡದೇ ಗುಂಪು ಗುಂಪಾಗಿ ಓಡಾಡುವಂತೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.
ರಾತ್ರಿ ಬೆಳೆಗಳಿಗೆ ನೀರುಣಿಸಲು ಹೋಗುವ ರೈತರು ಭಯದಿಂದ ಹೊರಗೇ ಬರುತ್ತಿಲ್ಲ. ಗಜೇಂದ್ರಗಡದ ಗಿರಣಿ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕತ್ತಲಾಗುವ ಮೊದಲೇ ಮನೆಗೆ ಮರಳುತ್ತಿದ್ದಾರೆ. ತಡವಾದರೆ ಹಳ್ಳಿಗಳಿಗೆ ಬಾರದೇ ಬಸ್ ನಿಲ್ದಾಣ ಅಥವಾ ಪಟ್ಟಣದಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಚಿರತೆ ಸರೆಗೆ ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದು ಈವರೆಗೂ ಚಿರತೆ ಸಿಕ್ಕಿಲ್ಲ.
ಮೋಕಾ ಕ್ರಾಸ್‌ನಲ್ಲಿ ಗ್ರಾಮಸ್ಥರಿಗೆ ಚಿರತೆ ಕಾಣಿಸಿಕೊಂಡಿದೆ. ಕುಂಟೋಜಿಯ ಮರದ ಮೇಲೆ ಚಿರತೆಯ ಹೆಜ್ಜೆ ಗುರುತು ಕಂಡುಬಂದಿವೆ. ಅದೇ ದಿನ ರಾತ್ರಿ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೋನನ್ನು ಹಾಕಿದ್ದರೂ ಚಿರತೆ ಅದರಲ್ಲಿ ಸಿಕ್ಕಿಬಿದ್ದು, ಕೂಡಲೇ ತಪ್ಪಿಸಿಕೊಂಡಿದೆ ಎನ್ನುತ್ತಾರೆ ಗ್ರಾಮದ ಜನ.
ಚಿರತೆ ಭಯದಿಂದ ಹೊಲಗಳಿಗೆ ನೀರುಣಿಸುವ ರೈತರು ರಾತ್ರಿ 10 ಗಂಟೆಗೆ ಮೋಟಾರ್ ಸ್ಟಾರ್ಟ್ ಮಾಡಿ ಮನೆಗೆ ಬರುತ್ತಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಸರಬರಾಜು ನಿಂತರೆ, ನೀರು ಹರಿಯುವುದು ನಿಲ್ಲುತ್ತದೆ ಇದು ಬೆಳೆಗಳನ್ನು ಹಾಳುಮಾಡುತ್ತದೆ ಎನ್ನುವುದು ಇಲ್ಲಿನ ರೈತರ ಆತಂಕ.
ಒಟ್ಟಿನಲ್ಲಿ ಸುಮಾರುದಿನಗಳಿಂದ ಚಿರತೆಯ ಭಯದಲ್ಲಿ 15 ಗ್ರಾಮಗಳ ಜನ ಜೀವನ ನಡೆಸುತ್ತಿದ್ದು, ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.