ಅರಸತ್ವ ಮೇಲಲ್ಲ, ಅಗಸತ್ವ ಕೀಳಲ್ಲ ಎಂದು ಕೇವಲ ಬಟ್ಟೆಯನ್ನು ಶುಬ್ರಗೊಳಿಸದೆ ಜನರ ಮನಸ್ಸಿನಲ್ಲಿರುವ ಕೊಳೆಯನ್ನು ತೊಳೆದವರು ಮಡಿವಾಳ ಮಾಚಿದೇವರು ಎಂದು ಪ್ರಾಧ್ಯಾಪಕ ಡಾ. ರಾಜಶೇಖರ ಎಸ್ ದಾನರಡ್ಡಿ ಹೇಳಿದ್ದಾರೆ.
ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸಾಹಿತ್ಯವು ಕೇವಲ ಅರಮನೆಗೆ ಸೀಮಿತವಾಗದಾರದೆಂದು ಶ್ರೀಸಾಮಾನ್ಯನಿಗೆ ತಿಳಿಯುವ ಹಾಗೇ ಸರಳ ಭಾಷೆಯಲ್ಲಿ ಬಸವಾದಿ ಶರಣರಲ್ಲಿ ಒಬ್ಬರಾಗಿ ಮಡಿವಾಳ ಮಾಚಿದೇವರು ವಚನಗಳನ್ನು ರಚಿಸಿ ಜನಸಾಮಾನ್ಯರ ಮನ ಮುಟ್ಟಿಸಿದ್ದಾರೆ. ಶಿಕ್ಷಣವೂ ಕೇವಲ ಉಳ್ಳವರಿಗೇ ಮಾತ್ರ ಮೀಸಲಾಗಿದ್ದ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಗುರುಗಳ ಹತ್ತಿರ ಶಿಕ್ಷಣ ಪಡೆದು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವಂತೆ ಎಲ್ಲರಿಗೂ ಬಾಳುವ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿ ಮೂಡಿಸಿದವರಾಗಿದ್ದಾರೆ” ಎಂದರು.
“ಮಡಿವಾಳ ಮಾಚಿದೇವರು ತಮ್ಮ ವಚನಗಳಲ್ಲಿ ಕಾಯಕಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದು ಭಕ್ತಿ ಮತ್ತು ನಿಷ್ಟೆಯಿಂದ ಕಾಯಕದಲ್ಲಿ ನಿರತರಾದರೆ ದೇವರು ಸಹ ಒಲಿಯುವನು ಎಂದು ಸಾರಿದ್ದಾರೆ.ನಡೆನುಡಿ ತಪ್ಪದೇ, ತತ್ವ ಸಿದ್ದಾಂತವನ್ನು ಅನುಸರಿಸಿ ನಮ್ಮ ವ್ಯಕ್ತಿತ್ವವನ್ನು ಉನ್ನತಗೊಳಿಸಬೇಕೆಂದು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಶ್ರೀಸಾಮಾನ್ಯನಾಗಿದ್ದ ಮಡಿವಾಳ ಮಾಚಿದೇವರ ಜೀವನ ಸಂದೇಶದ ಕಥೆಯನ್ನು ಅರ್ಥಪೂರ್ಣವಾಗಿ ತಿಳಿಸಿದ ಅವರು 12ನೇ ಶತಮಾನದ ವಚನ ಕ್ರಾಂತಿಯೂ ಕನ್ನಡಕ್ಕೆ ದೊಡ್ಡ ಸಂಪತ್ತು” ಎಂದು ಡಾ. ರಾಜಶೇಖರ ಎಸ್ ದಾನರಡ್ಡಿ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ.ಬಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಸೇರಿದಂತೆ ಗಣ್ಯರು, ಸಮಾಜ ಭಾಂದವರು, ಹಿರಿಯರು ಹಾಜರಿದ್ದರು.