ಮಹಾಯೋಗಿ ವೇಮನರು ಭೋಗ ಜೀವನದ ದಾಸರಾಗಿ, ವೈರಾಗ್ಯವನ್ನು ತಾಳಿ, ಇಡೀ ಮಾನವ ಸಂಕುಲಕ್ಕೆ ಬದುಕಿನ ನಶ್ವರತೆಯನ್ನು ತಿಳಿಸುತ್ತಾ ವಾಸ್ತವಿಕತೆಯ ಬೆಳಕನ್ನು ಪರಿಚಯಿಸಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ.ರಮೇಶ್ ಕಲ್ಲನಗೌಡರ ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳು ಇಡೀ ಮಾನವ ಕಲ್ಯಾಣಕ್ಕೆ ಪೂರಕವಾದವುಗಳು. ಮಹಾಯೋಗಿ ವೇಮನರ ಕಾವ್ಯ ಸೃಷ್ಟಿಯಲ್ಲಿ ಅಲೌಕಿಕ ಮಾರ್ಗದ ಸಾರ್ಥಕ ಹಾದಿಯನ್ನು ತೋರುತ್ತ ಶರಣರ ತತ್ವ ಚಿಂತನೆ ಪರಂಪರೆಯನ್ನು ನಾವೆಲ್ಲ ಕಾಣಬಹುದಾಗಿದೆ. ನಿರುಪಯೋಗಿ, ದುಶ್ಚಟಗಳ ದಾಸರಾಗಿದ್ದ ವೇಮನರನ್ನು ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲರಾದರು” ಎಂದು ವಿವರಿಸಿದರು.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಆಸೆ-ಆಮಿಷಗಳಿಗೆ ಒಳಪಟ್ಟು ಭೋಗಿಯಾದಂತಹ ವೇಮನರು ತ್ಯಾಗ ಜೀವನದ ಸಾರ್ಥಕತೆಯೊಂದಿಗೆ ಮನುಕುಲದ ಉದ್ಧಾರಕ್ಕಾಗಿ ಮಹಾ ಯೋಗಿಯಾದರು” ಎಂದು ನುಡಿದರು.
“ಮಹಾಯೋಗಿ ವೇಮನರು ಶ್ರೇಷ್ಠ ವಚನಕಾರ, ಕವಿ, ಸಮಾಜ ಚಿಂತಕ, ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ಮಹಾಯೋಗಿಯಾಗಿದ್ದರು. ಅವರು ಸಾರ್ವಕಾಲಿಕ ದಾರ್ಶನಿಕರಾಗಿದ್ದು, ಅವರ ತತ್ವ ಸಿದ್ಧಾಂತಗಳು ಇಂದಿಗೂ ಮಾದರಿಯಾಗಿವೆ. ಪ್ರಸ್ತುತ ಯುವ ಪೀಳಿಗೆಗೆ ಮಹಾಯೋಗಿ ವೇಮನರ ತತ್ವ ಸಿದ್ಧಾಂತಗಳನ್ನು ತಿಳಿಸುವ ಕಾರ್ಯವಾಗಬೇಕಾಗಿದೆ” ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಮಾತನಾಡಿ, “ಸಾಮಾಜಿಕ ಸಮಸ್ಯೆಗಳನ್ನು ತೊಡೆದು ಹಾಕಲು ಹಾಗೂ ಸಾಮಾಜಿಕ ಸಮಾನತೆ ತರಲು ಅನೇಕ ದಾರ್ಶನಿಕರು ಶ್ರಮಿಸಿದ್ದಾರೆ. ಅಂತಹವರಲ್ಲಿ ಮಹಾಯೋಗಿ ವೇಮನರೂ ಒಬ್ಬರಾಗಿದ್ದಾರೆ. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನರು ಮಹಾಯೋಗಿಯಾಗಿದ್ದಾರೆ. ವೇಮನರು ಪದ್ಯಗಳ ಮೂಲಕ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಿದ್ದು, ಅವರ ತತ್ವಾದರ್ಶಗಳು ಸರ್ವಕಾಲಿಕವಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಜ 25ರವರೆಗೆ ರೂಟ್ ಮಾರ್ಚ್
ಕಾರ್ಯಕ್ರಮದಲ್ಲಿ ಬಸವಯ್ಯ ಶಾಸ್ತ್ರಿ ಸಾನಿಧ್ಯ ವಹಿಸಿದ್ದರು. ಸಮಾಜದ ಮುಖಂಡರುಗಳಾದ ರವಿ ಮೂಲಿಮನಿ, ಪ್ರೇಮಾ ಮೇಟಿ, ಶೇಖಣ್ಣ ಗದ್ದಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಸಮಾಜದ ಗಣ್ಯರು, ಮುಖಂಡರುಗಳು ಇದ್ದರು.