“ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಆಚರಣೆ ಮತ್ತು ದಿ. ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಮಾ. 16ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ” ಎಂದು ಮಾಜಿ ಶಾಸಕ ಹಾಗೂ ಸಮಿತಿ ಅಧ್ಯಕ್ಷ ಡಿ.ಆರ್. ಪಾಟೀಲ್ ಹೇಳಿದರು.
ಗದಗ ಪಟ್ಟಣದಲ್ಲಿ ಇಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಕೆ.ಎಚ್. ಪಾಟೀಲ ಪ್ರತಿಷ್ಠಾನ ವತಿಯಿಂದ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕಾರ್ಯಕ್ರಮ ಜರುಗಲಿದ್ದು, ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುವರ” ಎಂದು ಹೇಳಿದರು.
“ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸುವರು ಎಂದು ಹೇಳಿದರು.
“ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಘನ ಉಪಸ್ಥಿತಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಹಾಗೂ ಕೋ-ಆಪರೇಟಿವ್ ಫೆಡರೇಶನ್ ಅಧ್ಯಕ್ಷ ಜಿ.ಟಿ. ದೇವೇಗೌಡ, ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ, ಕಾರ್ಮಿಕ ಸಚಿವ ಸಂತೋಷ ಲಾಡ್, ಜವಳಿ, ಎಪಿಎಂಸಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು” ಎಂದರು.
“ಕೆ.ಎಚ್. ಪಾಟೀಲ ಅವರು 1954ರಲ್ಲಿ ರಾಜಕೀಯ ಜೀವನ ಆರಂಭಿಸಿದರು. ಸರಪಂಚ್ ಆಗಿ, ಎಪಿಎಂಸಿ ಅಧ್ಯಕ್ಷರಾಗಿ, ದಿ. ಗದಗ ಕಾಟನ್ ಸೇಲ್ ಸೊಸೈಟಿ ಅಧ್ಯಕ್ಷರಾಗಿ, ರಾಜ್ಯದ ಪ್ರಭಾವಿ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ ಜಿಲ್ಲಾಧಿಕಾರಿ ಕಾರು ಜಪ್ತಿ ಪ್ರಕರಣ: ಕಾನೂನು, ಸಂವಿಧಾನ ಮತ್ತು ಅಧಿಕಾರಶಾಹಿ
“ಸಹಕಾರಿ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಕೆ.ಎಚ್. ಪಾಟೀಲ ಅವರು ಎಪಿಎಂಸಿಯಲ್ಲಿ ಮೊಟ್ಟ ಮೊದಲ ಬಾರಿ ಟೆಂಡರ್ ಪದ್ಧತಿಯನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಯಾವ ಯಾವ ಸ್ಥಾನಮಾನದಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದರು, ಅಲ್ಲಲ್ಲಿ ತಮ್ಮ ಛಾಪನ್ನು ಅಚ್ಚಳಿಯದ ಹಾಗೆ ಕೆಲಸ ನಿರ್ವಹಿಸಿ ಜನಮಾನಸದಲ್ಲಿ ನೆನಪಾಗಿ ಉಳಿಸಿದ್ದಾರೆ” ಎಂದು ಹೇಳಿದರು.
