2024-25ನೇ ಸಾಲಿನಲ್ಲಿ ಗದಗ ಜಿಲ್ಲಾ ಕೇಂದ್ರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ರಿಂಗ್ ರೋಡ್ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ ಪಾಟೀಲ್ ಹೇಳಿದರು.
ಗದಗ ನಗರದಲ್ಲಿ ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ಅಬ್ದುಲ್ ಕಲಾಂ ಶಾದಿಮಹಲ್ ರಸ್ತೆಯಿಂದ ಸಂಬಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
“ಪ್ರಸ್ತುತದಲ್ಲಿ 4 ಕೋಟಿ ರೂ. ಅನುದಾನದಲ್ಲಿ 1.9 ಕಿಮೀ ರಿಂಗ್ ರೋಡ್ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ರಿಂಗ್ ರೋಡ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು” ಎಂದರು.
“ಧೋಬಿ ಘಾಟ್‍ದಿಂದ ಮುಂಡರಗಿ ರಸ್ತೆ, ಅಲ್ಲಿಂದ ಬೆಟಗೇರಿ, ನಂತರ ಹೊಂಬಳ ರಸ್ತೆ ಸಂಪರ್ಕ ಕಲ್ಪಿಸಿದರೆ ರಿಂಗ್‍ರೋಡ್ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ₹241 ಕೋಟಿ ಅನುದಾನ ಅಗತ್ಯವಾಗಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಿಂಗ್‍ರೋಡ್ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಅನುದಾನ ನೀಡುವ ಭರವಸೆ ನೀಡಿದ್ದು, ರಿಂಗ್ ರೋಡ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿದೆ” ಎಂದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಾಸಕರಿಗೆ ₹25 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದು, ಅದನ್ನು ಅತ್ಯಂತ ಅಗತ್ಯ ಹಾಗೂ ಅನಿವಾರ್ಯ ಕಾಮಗಾರಿಗಳಿಗೆ ಬಳಸಲು ತಿಳಿಸಿದ್ದಾರೆ. ಈ ಅನುದಾನವನ್ನೂ ಕೂಡ ನಗರದ ಕಾಮಗಾರಿಗಳನ್ನು ಕೈಗೊಳ್ಳಲು ಬಳಸಲಾಗುವುದು” ಎಂದು ತಿಳಿಸಿದರು.
“ಕಳೆದ ಸಾಲಿನ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಲ್ಲಿ ಪೂರ್ಣವಾಗದ ಹಾಗೂ ಆರಂಭವಾಗದ ಅಂದಾಜು 15 ಕಾಮಗಾರಿಗಳು ಬಾಕಿ ಇದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಅಲ್ಲದೆ ಮುಂದಿನ ಒಂದು ತಿಂಗಳೊಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು” ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಅವರು ನಿರ್ದೇಶನ ನೀಡಿದರು.
ಗದಗ ಬೆಟಗೇರಿ ನಗರಸಭೆ ಸದಸ್ಯ ಎಲ್ ಡಿ ಚಂದಾವರಿ ಮಾತನಾಡಿ, “ಇಂದು ಆರಂಭವಾದ ಕಾಮಗಾರಿ ಪೂರ್ಣಗೊಂಡರೆ ರಿಂಗ್ ರೋಡ್ ಕಾಮಗಾರಿ ಶೇ.75 ರಷ್ಟು ಪ್ರಗತಿ ಸಾಧಿಸಿದಂತಾಗುತ್ತದೆ. ಇದರಿಂದ ನಗರದ ಸಂಚಾರಿ ದಟ್ಟಣೆ ನಿಯಂತ್ರಣ ಖಂಡಿತವಾಗಿಯೂ ಕಡಿಮೆಯಾಗಲಿದೆ” ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ಬಿ ಬಿ ಅಸೂಟಿ ಮಾತನಾಡಿ, “ಈ ಹಿಂದೆ ಎಚ್ ಕೆ ಪಾಟಿಲ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ವೇಳೆಯಲ್ಲಿ ಅಪಾರ ಅನುದಾನ ಜಿಲ್ಲೆಗೆ ತರುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಅವರು ಅಭಿವೃದ್ಧಿ ಕಲ್ಪನೆಯೂ ಅಪಾರವಾಗಿದೆ. ರಿಂಗ್‍ರಸ್ತೆ ಪೂರ್ಣ ಆದಲ್ಲಿ, ರೋಣ, ಗಜೇಂದ್ರಗಡದಿಂದ ಆಗಮಿಸುವ ವಾಹನಗಳು ನಗರದ ಹೊರಗಿನಿಂದಲೇ ಸಾಗುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಣ ಆಗಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ವಿತರಣೆ; ವಿಕಲಚೇತನರಿಂದ ಅರ್ಜಿ ಆಹ್ವಾನ
“ನವೆಂಬರ್ 1 ರಿಂದ 3ರವರೆಗೆ ಕರ್ನಾಟಕ ಸಂಭ್ರಮ-50 ಉತ್ತಮ ಕಾರ್ಯಕ್ರಮ ಮಾಡಿ, ಐತಿಹಾಸಿಕ ಸಂಭ್ರಮಕ್ಕೆ ಕಾರಣರಾದವರು ಎಚ್ ಕೆ ಪಾಟಿಲ್. ಕರ್ನಾಟಕ ಸಂಭ್ರಮದಿಂದಾಗಿ 50 ವರ್ಷದ ಹಿಂದಿನ ಗತ ವೈಭವ ಮರುಸೃಷ್ಟಿಯನ್ನು ನಾವೆಲ್ಲ ಅನುಭವಿಸುವಂತಾಯಿತು” ಎಂದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಬಿ ಎಸ್ ತಳವಾರ, ಕರಿಸೋಮನಗೌಡ್ರ, ರೋಣದ ಅಜ್ಜಣ್ಣ ಪಾಟಿಲ್, ಶರಣು, ಯರನಾಳ, ಅಶೋಕ ಮಂದಾಲಿ ಸೇರಿದಂತೆ ಇತರರು ಇದ್ದರು.