ಬೆಣ್ಣೆಹಳ್ಳ ಪ್ರವಾಹದಿಂದ ಹಾನಿಗೀಡಾದ ನರಗುಂದ ಹಾಗೂ ರೋಣ ಭಾಗದ ಹಳ್ಳಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿದ ಜನಪ್ರತಿನಿಧಿಗಳು ವಿವಿಧ ಬಿತ್ತನೆ ಕ್ಷೇತ್ರಗಳ ಹಾನಿಗೀಡಾದ ಬಗ್ಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಕುರ್ಲಗೇರಿ ಗ್ರಾಮದ ಮೇಲ್ಸೇತುವೆ ಕೆಲಭಾಗಗಳಲ್ಲಿ ಗಿಡಗಂಟಿಗಳನ್ನು ತುರ್ತು ತೆರವುಗೊಳಿಸಲು ಸಚಿವ ಎಚ್.ಕೆ. ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುರ್ಲಗೇರಿ ಗ್ರಾಮದ ಸ್ಥಳಾಂತರ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕುರಿತು, ಮನೆಗಳ ಸಮರ್ಪಕ ಹಂಚಿಕೆ ಆಗದ ಕುರಿತು ಸಚಿವರಲ್ಲಿ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು ಮತ್ತು ಹೊಲಗಳಲ್ಲಿ ಒಡ್ಡು ಒಡೆದ ಕುರಿತು ಸಚಿವರ ಗಮನಕ್ಕೆ ತಂದರು.
ಈ ವೇಳೆ ಸಚಿವ ಎಚ್ ಕೆ ಪಾಟೀಲ ಮಾತನಾಡಿ, “ಕುರ್ಲಗೇರಿ ನೂತನ ಗ್ರಾಮಕ್ಕೆ ಜನರು ಸ್ಥಳಾಂತರ ಗೊಂಡಿಲ್ಲ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಅಗತ್ಯವಿರುವರ ಪಟ್ಟಿ ಸಿದ್ದಪಡಿಸಿ ಅವರಿಗೆ ಮನೆ ಹಂಚಲು ಸೂಚಿಸಿದ್ದೇನೆ” ಎಂದು ತಿಳಿಸಿದರು.
ಗ್ರಾಮದಲ್ಲಿ ನೀರಿನ ಹರಿವಿನಿಂದ ಒಡ್ಡು ಒಡೆದು ಹೋದ ಕುರಿತು ಸಚಿವ ಶಾಸಕರಲ್ಲಿ ಜನರು ನೋವು ತೋಡಿಕೊಂಡರು. ಒಡ್ಡು ಹಾಕಿಸಿಕೊಡುವುದಾಗಿ ಶಾಸಕ ಸಿ.ಸಿ. ಪಾಟೀಲ, ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.
ಹದಲಿ, ಯಾವಗಲ್, ಸುರಕೋಡ ಗ್ರಾಮಗಳಿಗೆ ಭೇಟಿ ನೀಡಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿ ಪರಿಶೀಲನೆ ನಡೆಸಿದರು.
“ಕಳೆದ ಬಾರಿ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆಹಾನಿ ರೈತರಿಗೆ ಸರ್ಕಾರ ಘೋಷಿಸಿದ್ದ ಮಧ್ಯಂತರ ಬೆಳೆ ಪರಿಹಾರ ರೈತರ ಖಾತೆ ಇನ್ನೂ ಬಾರದ ಕುರಿತು ರೈತರು ಅಳಲು ತೋಡಿಕೊಂಡರು. ಕಳೆದ ಬಾರಿ ಮಧ್ಯಂತರ ಬೆಳೆ ಪರಿಹಾರ ಮತ್ತು ಪ್ರಸಕ್ತ ಸಾಲಿನ ಬೆಳೆಹಾನಿ ಕ್ಷೇತ್ರವನ್ನು ತುರ್ತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಮುಖ ಅಂಶಗಳು : 1)ಬೆಣ್ಣೆಹಳ್ಳ ಪ್ರವಾಹದಿಂದ 2000 ಎಕರೆ ಕ್ಷೇತ್ರ ಬೆಳೆ ಹಾನಿ. 2)ತಕ್ಷಣ ಬೆಳೆಹಾನಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ. 3)ಬೆಣ್ಣೆಹಳ್ಳ ಪ್ರವಾಹ ತಡೆಗೆ ಸರ್ಕಾರದ 200 ಕೋಟಿ ಯೋಜನೆ ಶೀಘ್ರ ಜಾರಿ. 4)ಬೆಣ್ಣೆಹಳ್ಳದಲ್ಲಿ ಹರಿಯುವ 16 ಟಿಎಂಸಿ ನೀರು ಸಂಗ್ರಹ ಅಸಾಧ್ಯ. 5) ಶೀಘ್ರ ಬಂದು ಹೋಗುವ ಪ್ರವಾಹ ಆದ್ದರಿಂದ ಸಂಗ್ರಹಣೆ ಅಸಾಧ್ಯ. 6) ಯಾವಗಲ್, ಮೆಣಸಗಿ ಸಂಪರ್ಕ ಸೇತುವೆ ಹೆಚ್ಚಿಸುವ ಭರವಸೆ.
“ಬೆಣ್ಣೆಹಳ್ಳದ ಭಾಗದಲ್ಲಿ ಅಂದಾಜು 7-8 ಸಾವಿರ ಎಕರೆ ಭೂಮಿ ಪ್ರವಾಹಕ್ಕೆ ಒಳಪಡುತ್ತದೆ. ಈ ಬಾರಿ 2000 ಕ್ಕೂ ಅಧಿಕ ಎಕರೆ ಬಿತ್ತನೆ ಜಮೀನು ನಾಶ ಆಗಿರಬಹುದು ಎಂದು ಅಂದಾಜಿಸಲಾಗಿದೆ. ತುರ್ತು ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಬೆಳೆ ಪರಿಹಾರ ಸಮರ್ಪಕ ನೀಡಲಾಗುವುದು. ಸಚಿವರು ಎಚ್ ಕೆ ಪಾಟೀಲ್ ಹೇಳಿದರು.
“ನರಗುಂದ ಕ್ಷೇತ್ರದ ನಾಲ್ಕಾರು ಹಳ್ಳಿಗಳ ಜನರು ಪ್ರವಾಹ ಸಂದರ್ಭದಲ್ಲಿ ಸಮಸ್ಯೆ ಅನುಭವಿಸುತ್ತಾರೆ. ಶಿಗ್ಗಾವಿಯಿಂದ ನರಗುಂದ, ರೋಣ ಕ್ಷೇತ್ರ ಮುಕ್ತಾಯದ ವರೆಗೂ ಬೆಣ್ಣೆಹಳ್ಳಕ್ಕೆ ತಡೆಗೋಡೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ಘೋಷಿಸಿದ ಯೋಜನೆ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ” ಶಾಸಕ ಸಿ. ಸಿ. ಪಾಟೀಲ ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕರ್ತವ್ಯ ಲೋಪ ಎಸಗಿದ್ದಕ್ಕೆ ಪಿಡಿಒ ಅಮಾನತು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಿದ್ದು ಪಾಟೀಲ, ರಾಜಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
