ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಯೋಜಿಸಲಾದ ‘ಕರ್ನಾಟಕ ದರ್ಶನ’ ಮಕ್ಕಳ ಪ್ರವಾಸಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಗದಗ ನಗರದ ಮುನ್ಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ (ಜ.8) ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯಿಂದ ಮಕ್ಕಳಿಗೆ ಕರ್ನಾಟಕದ ಪ್ರಮುಖ ಶೈಕ್ಷಣಿಕ ಪ್ರವಾಸಿ ತಾಣಗಳ ಪರಿಚಯ ಮಾಡಿಸುವ ಸದುದ್ದೇಶ ಹೊಂದಿದೆ. ಮಕ್ಕಳು ತಮ್ಮ ಶಾಲಾ ಶೈಕ್ಷಣಿಕ ಅವಧಿಯಲ್ಲಿ ರಾಜ್ಯದ ಪ್ರವಾಸ ಕೈಕೊಳ್ಳುವ ಮೂಲಕ ಮುಂದಿನ ಕಲಿಕೆಗೆ ಈ ಪ್ರವಾಸ ಸದ್ಭಳಕೆಯಾಗಲಿ ಎಂದರು. ಪ್ರಸಕ್ತ ಸಾಲಿನ 8ನೇ ತರಗತಿಯ ವಿದ್ಯಾರ್ಥಿಗಳು ಈ ಪ್ರವಾಸ ಕೈಗೊಳ್ಳುತ್ತಿದ್ದು ಪ್ರವಾಸವು ಉತ್ತಮ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಸಮನ್ವಯಾಧಿಕಾರಿ ಜೆ.ಎ. ಬಾವಿಕಟ್ಟಿ, ದೈಹಿಕ ಶಿಕ್ಷಣ ಅಧಿಕಾರಿ ಪವಾರ, ಶ್ರೀಮತಿ ವಣಿಕ್ಯಾಲ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಸೇರಿದಂತೆ ಪೋಷಕರು, ಮಕ್ಕಳು ಹಾಜರಿದ್ದರು.