ಮುಂಡರಗಿಯ ಎಮ್.ಸಿ.ಎಸ್. ಶಾಲೆಯಲ್ಲಿ ತಾಲೂಕ ಮಟ್ಟದ ವಿಶ್ವ ಸೊಳ್ಳೆ ದಿನಾಚಾರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ, ತಾಲೂಕಾ ಆರೋಗ್ಯ ಅಧಿಕಾರಿಗಳು ಮುಂಡರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಮುಂಡರಗಿ ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಶ ಟಿ.ಎಸ್ ಕಾರ್ಯಕ್ರಮ ಉದ್ಘಾಟಿಸಿ, ಮಲೇರಿಯಾ ರೋಗವು ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಸೊಳ್ಳೆಗಳಿಂದ ಬರುವ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಹಾಗೂ ನಿಯಂತ್ರಣ ಕುರಿತು ನಿಮ್ಮ ಮನೆಯ ಸುತ್ತಮುತ್ತಲಿರುವ ಜನರಿಗೆ ಅರಿವು ಮೂಡಿಸಬೇಕೆಂದು ಎಂದರು.
ಮುಂಡರಗಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಎಮ್.ಎಸ್. ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿ ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ, ಡೆಂಗೀ, ಚಿಕನಗುನ್ಯಾ, ಮೆದಳುಜ್ವರ, ಆನೆಕಾಲು ರೋಗ, ಜೀಕಾ ರೋಗಗಳು ಬರುತ್ತವೆ. ಅದಕ್ಕಾಗಿ ಸೊಳ್ಳೆಗಳ ನಿಯಂತ್ರಣ ಅತ್ಯಅವಶ್ಯವಾಗಿದೆ. ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಜೊತೆಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಎಂಟಮಾಲಿಜಿಸ್ಟ್ ಶ್ರೀಮತಿ ಅನ್ನಪೂರ್ಣ ಶೆಟ್ಟರ ಮಾತನಾಡಿ, ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲುಗಡೆ ಮುಚ್ಚಬೇಕು. ಮನೆಯ ಕಿಟಕಿಗಳಿಗೆ ಜಾಲರಿಗಳನ್ನು ಬಳಸಬೇಕು. ಸಾಯಂಕಾಲ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು ಎಂದು ಶಾಲಾ ಮಕ್ಕಳಿಗೆ ತಿಳುವಳಿಕೆ ನೀಡಿದರು. ಯಾವುದೇ ಜ್ವರವಿರಲ್ಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಹನಮರಡ್ಡಿ ಇಟಗಿ ಮಾತನಾಡಿ, ಸೊಳ್ಳೆಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಜೊತೆಗೆ ಎಲ್ಲಾ ಸಮುದಾಯದವರು ಹಾಗೂ ಎಲ್ಲಾ ಇಲಾಖೆಯವರು ಸೇರಿಕೊಂಡು ಸೊಳ್ಳೆ ನಿಯಂತ್ರಣ ಮಾಡುವಲ್ಲಿ ಸಹಕರಿಸಬೇಕೆಂದರು.
ಬಿ.ಪಿ. ಮಟ್ಟಿ ಸ್ವಾಗತಿಸಿದರು. ಮುಂಡರಗಿ ಸಿ.ಆರ್.ಪಿ ವಿ.ಎಚ್. ಹೊಳೆಯಮ್ಮನವರ ವಂದಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.