- ಜಿಲ್ಲೆಯಲ್ಲಿ 3,02,690 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯತೆ
- ಜಿಲ್ಲೆಯಲ್ಲಿ 18,496 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು
ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವ ಹಿನ್ನೆಲೆ ಗದಗ ಜಿಲ್ಲೆಯ ಪ್ರಗತಿಪರ ಕೃಷಿಕರು ಹಾಗೂ ರೈತ ಮುಖಂಡರೊಂದಿಗೆ ಜಂಟಿ ಕೃಷಿ ನಿರ್ದೇಶಕರು ಸಭೆ ನಡೆಸಿದ್ದಾರೆ. ರೈತರಿಗೆ ಮುಂಗಾರು ಬಿತ್ತನೆ ಕುರಿತಂತೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಅಂದಾಜು 3,02,690 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಆಗುವ ಸಾಧ್ಯತೆ ಇದೆ. ಹೈಬ್ರಿಡ್ ಜೋಳ, ಮುಸುಕಿನ ಜೋಳ, ಸಜ್ಜೆ, ಹೆಸರು, ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್ ಹತ್ತಿ ಬಿತ್ತನೆಗಾಗಿ ಒಟ್ಟಾರೆ 85,989 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗಬಹುದು. ಈಗಾಗಲೇ ಜಿಲ್ಲೆಯಲ್ಲಿ 8,685 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು, ಬಿತ್ತನೆಗೆ ಅನುಸಾರವಾಗಿ ಬಿತ್ತನೆ ಬೀಜಗಳ ಸರಬರಾಜು ಆಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ತಿಳಿಸಿದರು.
ರಸಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಒಟ್ಟಾರೆ ಯೂರಿಯಾ 7,885 ಮೆಟ್ರಿಕ್ ಟನ್, ಡಿ.ಎ.ಪಿ 5,406, ಎಂ.ಓ.ಪಿ. 208, ಎನ್.ಪಿ.ಕೆ.ಎಸ್ 4,861, ಎಸ್.ಎಸ್.ಪಿ. 134 ಸೇರಿದಂತೆ ಒಟ್ಟಾರೆ 18,496 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ. ಬಿತ್ತನ ಪ್ರಮಾಣ ಹಾಗೂ ಅಗತ್ಯಕ್ಕನುಸಾರ ಪೂರೈಕೆಗೆ ಕ್ರಮ ವಹಿಸಲಾಗುವದು. ರೈತರು ಬೆಳೆಯುವ ಬೆಳೆಗೆ ಅನುಸಾರವಾಗಿ ಬಿತ್ತನೆ ಪ್ರಮಾಣಕ್ಕೆ ಅಗತ್ಯವಿರುವ ರಸಗೊಬ್ಬರಗಳನ್ನು ಮಾತ್ರ ಖರೀದಿಸಿ ಬಳಸಬೇಕು ಅನಗತ್ಯ ರಸಗೊಬ್ಬರ ದಾಸ್ತಾನು ಬೇಡ ಎಂದು ಸಲಹೆ ನೀಡಿದರು.

ರಸಗೊಬ್ಬರಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಬೇಕು ಹೆಚ್ಚಿನ ದರದಲ್ಲಿ ರಸಗೊಬ್ಬರರ ಮಾರಾಟ ಮಾಡುತ್ತಿರುವದು ಕಂಡುಬಂದಲ್ಲಿ ದೂರು ನೀಡಲು ತಿಳಿಸಿದರು.
ಜಿಲ್ಲೆಯಲ್ಲಿ ಇನ್ನು 37,900 ರೈತರು ಈ ಕೆವೈಸಿ ಮಾಡಿಸಲು ಬಾಕಿ ಇದ್ದು, ಗ್ರಾಮಗಳಲ್ಲಿನ ನಾಗರಿಕ ಸೇವಾ ಕೇಂದ್ರ ಮತ್ತು ಗ್ರಾಮ ಓನ್ ಕೇಂದ್ರದ ಮುಖಾಂತರ ತುರ್ತಾಗಿ ಈಕೆವೈಸಿ ಮಾಡಿಸಿಕೊಳ್ಳಬೇಕು. ಮುಂದಿನ 14 ನೇ ಕಂತಿನ ಅನುದಾನ ಬಾಕಿ ಇರುವ ರೈತರು ಈಕೆವೈಸಿ ಮಾಡಿಸಿಕೊಳ್ಳಲು ಸುಚಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಸಕಿ ಕರೆಮ್ಮಗೆ ನಿಂದನೆ ಆರೋಪ; ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಮುಂಗಾರು ಮಳೆ ಆರಂಭವಾಗಲಿದ್ದು ರೈತರು ಬಿತ್ತನೆಗೆ ಅಗತ್ಯ ಸಿದ್ಧತೆಗಳನ್ನು, ಬೀಜೊಪಚಾರ ಮಾಡಿಟ್ಟುಕೊಳ್ಳಬೇಕು. ಮಳೆ ಹಾಗೂ ವಾತಾವರಣಕ್ಕೆ ಅನುಗುಣವಾಗಿ ಯಾವ ಬೆಳೆ ಬೆಳೆಯಬೇಕು ಹಾಗೂ ಬೀಜೊಪಚಾರ ಯಾವ ಹಂತದಲ್ಲಿ ಮಾಡಬೇಕು ಎನ್ನುವದರ ಬಗ್ಗೆ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಬಿತ್ತನೆ ಕಾರ್ಯದ ನಂತರ ತಾವು ಬೆಳೆದ ಬೆಳೆಗೆ ರೈತರೆಲ್ಲರೂ ಬೆಳೆ ವಿಮೆ ಮಾಡಿಸಬೇಕು. ಇದರಿಂದ ಒಂದು ವೇಳೆ ಬೆಳೆ ಹಾನಿಯಾದಲ್ಲಿ ಬೆಳೆ ವಿಮೆ ಆಸರೆಯಾಗಲಿದೆ ಎಂದರು.
ಸಭೆಯಲ್ಲಿ ಪ್ರಗತಿಪರ ರೈತರು, ರೈತ ಮುಖಂಡರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.