ನವಿಲುತೀರ್ಥ ಜಲಾಶಯ ಭರ್ತಿಗೆ ಏಳು ಅಡಿಯಷ್ಟೇ ಬಾಕಿಯಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಒಂದು ವಾರದಿಂದ ಮಲಪ್ರಭಾ ನದಿ ಮೇಲ್ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಕಳೆದ ಮೂರು ದಿನಗಳಿಂದ ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ನವಿಲುತೀರ್ಥ ಡ್ಯಾಂ ಭರ್ತಿಯಾಗಲು ಇನ್ನು ಏಳು ಅಡಿ ಮಾತ್ರ ಬಾಕಿಯಿದ್ದು, ನರಗುಂದ ತಾಲೂಕಿನ ಹಲವು ಹಳ್ಳಿಗಳಿಗೆ ನೆರೆ ಆತಂಕ ಉಂಟಾಗಿದೆ.
ಶನಿವಾರ ಸಂಜೆ ವೇಳೆಗೆ ನವಿಲುತೀರ್ಥ ಡ್ಯಾಂ 2,072 ಅಡಿಯಷ್ಟು ಭರ್ತಿಯಾಗಿದೆ. 18 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಇದೇ ವೇಗದಲ್ಲಿ ನೀರು ಬಂದರೆ ಮುಂದಿನ ಎರಡೇ ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಡ್ಯಾಂ ಭರ್ತಿಯಾದ ನಂತರ ಏಕಾಏಕಿ ನೀರು ಹರಿಸಿದರೆ ಪ್ರವಾಹ ಉಂಟಾಗುತ್ತದೆ. ಹಾಗಾಗಿ ಇದನ್ನು ತಡೆಗಟ್ಟಲು ಈಗಿನಿಂದಲೇ ಸಣ್ಣ ಪ್ರಮಾಣದಲ್ಲಿ ನೀರನ್ನು ಹೊರಬಿಡಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
“ನವಿಲುತೀರ್ಥ ಜಲಾಶಯದಿಂದ ಶನಿವಾರ ಸಂಜೆ ಐದು ಗಂಟೆಯಿಂದ 1000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅದೇರೀತಿ, 500 ಕ್ಯೂಸೆಕ್ ನೀರನ್ನು ಮಲಪ್ರಭಾ ಕಾಲುವೆಗೆ ಹರಿಸಲಾಗುತ್ತಿದೆ. ಒಟ್ಟಾರೆ, ಒಂದು ಸಾವಿರ ಕ್ಯೂಸೆಕ್‌ನಿಂದ ಐದು ಸಾವಿರ ಕ್ಯೂಸೆಕ್ ನೀರನ್ನು ನಿಧಾನವಾಗಿ ಹೊಳೆ, ಕಾಲುವೆಗಳಿಗೆ ಹರಿಸಲಾಗುವುದು” ಎಂದು ನೀರಾವರಿ ಇಲಾಖೆ ಎಂಜಿನಿಯರ್ ಜಗದೀಶ ಕುರಿ ಹೇಳಿದ್ದಾರೆ.
“ನವಿಲುತೀರ್ಥ ಡ್ಯಾಂನಿಂದ ನೀರು ಹರಿಸುತ್ತಿರುವ ಪರಿಣಾಮ ಮಲಪ್ರಭಾ ಹೊಳೆಯ ತಟದಲ್ಲಿರುವ ಎಂಟಕ್ಕೂ ಹೆಚ್ಚು ಗ್ರಾಮಗಳು ಸುರಕ್ಷತೆಯತ್ತ ಗಮನ ಹರಿಸಬೇಕಿದೆ. ಹೊಳೆ ಸಮೀಪ ಪಂಪ್‌ಸೆಟ್ ಇರುವ ರೈತರು ಪಂಪ್‌ಸೆಟ್, ಕೃಷಿ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅದೇರೀತಿ ಬೆಣ್ಣೆ ಹಳ್ಳದ ದಡದಲ್ಲಿರುವ ಗ್ರಾಮಗಳ ಜನರೂ ಕೂಡ ಸುರಕ್ಷತೆಯತ್ತ ಗಮನಹರಿಸಬೇಕು” ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ನರಗುಂದ ತಾಲೂಕಿನ ಕೊಣ್ಣೂರ, ಲಕಮಾಪುರ, ವಾಸನ, ಬೆಳ್ಳೇರಿ, ಕಪಲಿ, ಕಲ್ಲಾಪುರ, ಶಿರೋಳ, ಸುರಕೋಡ, ಕುರ್ಲಗೇರಿ, ಹದ್ಲಿ, ರಡ್ಡೇರನಾಗನೂರ, ಗಂಗಾಪುರ ಗ್ರಾಮಗಳು ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ಪ್ರವಾಹದ ಆತಂಕದಲ್ಲಿವೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದು ನಮ್ಮ ಕಾಲೇಜಿನ ಹೆಮ್ಮೆ: ಪ್ರಾಂಶುಪಾಲ ಎ ಆರ್ ಹಂಡೆ
“ಮಳೆ ಹೆಚ್ಚಾಗಿರುವ ಕಾರಣ ನವೀಲುತೀರ್ಥ ಡ್ಯಾಂನ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಲಿದೆ. ಶನಿವಾರ ಸಂಜೆಯಿಂದ ನದಿಗೆ ಅಂದಾಜು 1 ಸಾವಿರದಿಂದ 5 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಮಲಪ್ರಭಾ ನದಿಯ ತೀರದ ಜನರು ನದಿತಟದಿಂದ ಅಂತರ ಕಾಯ್ದುಕೊಳ್ಳಬೇಕು” ಎಂದು ಶಾಸಕ ಸಿ ಸಿ ಪಾಟೀಲ ಮನವಿ ಮಾಡಿದ್ದಾರೆ.
“ಒಳಹರಿವು ಹೆಚ್ಚಾದ ಪರಿಣಾಮ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹೊಳೆ, ಕಾಲುವೆಗೆ 1,500 ಕ್ಯೂಸೆಕ್ ನೀರು ಹರಿಸಲಾಗಿದೆ. ಪ್ರವಾಹ ಎದುರಿಸಲು ಎಲ್ಲ ವ್ಯವಸ್ಥೆ ಆಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ.
