ಗಟಾರದಲ್ಲಿ (ಒಳಚರಂಡಿ) ಊಳು ತುಂಬಿಕೊಡಿರುವ ಕಾರಣ ಚರಂಡಿ ನೀರು ರಸ್ತೆ ತುಂಬಾ ನಿಂತಿದೆ. ನಿಂತ ನೀರಿನಲ್ಲಿ ಹುಳುಗಳಾಗಿವೆ. ಇದರಿಂದ ಓಡಾಟಕ್ಕೆ ತುಂಬಾ ಅನಾನುಕೂಲವಾಗಿದ್ದು, ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುವ ಭೀತಿಯಲ್ಲಿರುವುದು ಗದಗ ಜಿಲ್ಲೆಯಲ್ಲಿ ಕಂಡುಬಂದಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ರಾಜೂರು ಗ್ರಾಮದ ದಲಿತ ಕಾಲೋನಿಯಲ್ಲಿ ಒಳಚರಂಡಿ ಸಮಸ್ಯೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಳೆ ಬಂತೆಂದರೆ ಸಮಸ್ಯೆ ಇನ್ನೂ ಉದ್ಭವಿಸುತ್ತದೆ. ಮಳೆ ನೀರು ಮುಂದೆ ಹೋಗದೆ ರಸ್ತೆಯಲ್ಲಿಯೇ ನಿಂತಿದ್ದು, ಅನೈರ್ಮಲ್ಯ ನಿರ್ಮಾಣವಾದೆ. ಇದರಿಂದ ಡೆಂಗಿಯಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಜೂರು ಗ್ರಾಮದ ದಲಿತ ಕಾಲೋನಿಯಲ್ಲಿ ಗಟಾರ ಸಮಸ್ಯೆ ಉಂಟಾಗಿದ್ದು, ರಸ್ತೆಯಲ್ಲೆಲ್ಲಾ ನೀರು ತುಂಬಿದೆ. ಇದರಿಂದ ನಿತ್ಯ ವೃದ್ಧರು, ಶಾಲಾ ಮಕ್ಕಳು, ದನಕರುಗಳು ಸೇರಿದಂತೆ ಎಲ್ಲರಿಗೂ ನಡೆದಾಡಲು ತೋದರೆಯುಂಟಾಗಿದೆ. ಈ ರಸ್ತೆಯ ಮೂಲಕ ಬೈಕ್, ಟ್ರ್ಯಾಕ್ಟರ್ ವಾಹನಗಳು ಸಂಚರಿಸಲು ಆಗದೆ, ಪುರುಷರು, ವಾಹನ ಸವಾರರು ಕೊಳಚೆ ನೀರಿನಲ್ಲಿ ಬೀಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ
“ನಮ್ಮ ಮಕ್ಕಳು ನಿತ್ಯ ಈ ರಸ್ತೆಯಲ್ಲಿ ಅಡ್ಡಾಡ್ತಾರ, ಆಟ ಆಡ್ತಾರ. ಈ ಗಟಾರದಿಂದ ಸೊಳ್ಳೆಗಳು ಜಾಸ್ತಿ ಆಗ್ಯಾವ, ವಾಸನೆ ತಡಿಯೋಕೆ ಆಗ್ತಿಲ್ಲ. ಗಟಾರ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಪಿಡಿಒ ಗಮನಕ್ಕೆ ತಂದರೂ ಕೂಡ ಯಾರೂ ಗ್ರಾಮದತ್ತ ಸುಳಿದಿಲ್ಲ” ಎಂದು ಕಾಲೋನಿಯ ಮಹಿಳೆಯೊಬ್ಬರು ಆರೋಪಿಸಿದರು.