ಗದಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜನವರಿ 26, ಗಣರಾಜ್ಯೋತ್ಸವ ದಿನದಂದು ಸಂವಿಧಾನ ಪೂರ್ವ ಪೀಠಿಕೆ ಕಂಠಪಾಠ ಸ್ಪರ್ಧೆ ಏರ್ಪಡಿಸುವ ಉದ್ದೇಶದಿಂದ ಪೂರ್ವಭಾವಿ ಸಭೆ ನಡೆಸಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಡಿಎಸ್ಎಸ್ ಜಿಲ್ಲಾ ಅಧ್ಯಕ್ಷ ಶಿವಾನಂದ ತಮ್ಮನ್ನವರ, ಇಂದಿನ ಯುವಕರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯುವಕರಲ್ಲಿ ಸಂವಿಧಾನ ಕುರಿತು ಅರಿವು ಮೂಡಿಸಿ ಜಾಗೃತಗೊಳಿಸುವುದು ಮುಖ್ಯವಾಗಿದೆ ಎಂದರು.
ಹೊಸ ಹೊಸ ಪ್ರಯತ್ನಗಳನ್ನು ನಾವು ಮಾಡುತ್ತಾ ಬಂದಿದ್ದೇವೆ. ಈ ಹಿಂದೆ ಜೈಭೀಮ್ ಸಿನೆಮಾ ಜನರಿಗೆ ತೋರಿಸಲಾಗಿದೆ. ಅಂಬೇಡ್ಕರ ಅವರ ವಿಚಾರಗಳ ಕುರಿತು, ಸಂವಿಧಾನದ ಕುರಿತು ಅನೇಕ ಕಾರ್ಯಕ್ರಮಗಳನ್ನು ನಾವು ಮಾಡಿಕೊಂಡು ಬಂದಿದ್ದೇವೆ.
ನಾವು ನಿಮ್ಮ ವಯಸ್ಸಿನಲ್ಲಿ ಇದ್ದಾಗ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ, ಹೂ ಮಾಲೆ ಹಾಕಿ ಸುಮ್ಮನಿದ್ದು ಬಿಡ್ತಿದ್ವಿ. ಸಂಘಟನೆಗೆ ಸಮಾನ ಒಡನಾಡಿಗಳ ಜೊತೆಗೆ ಬಂದ ಮೇಲೆ ಅಂಬೇಡ್ಕರ್ ಅಂದ್ರೆ ಏನು, ಅವರ ವಿಚಾರಗಳೇನು ತಿಳಿದುಕೊಳ್ಳುತ್ತಿದ್ದೇವೆ. ನೀವು ಯುವಕರು, ನಿಮಗೆ ಈಗಲೇ ಅಂಬೇಡ್ಕರ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಅವರನ್ನು ತಿಳಿದುಕೊಳ್ಳಬೇಕು, ಸಂವಿಧಾನ ಏನು ಯಾಕೆ ಮುಖ್ಯ, ಅದನ್ನು ಯಾಕೆ ನಾವು ಉಳಿಸಿಕೊಳ್ಳಬೇಕೆಂಬುದರ ಕುರಿತು ಅರಿತುಕೊಳ್ಳಬೇಕು ಎಂದು ಯುವಕರಿಗೆ ಮನವರಿಕೆ ಮಾಡಿದರು.
ಈ ಸಭೆಯಲ್ಲಿ ಎಡಿಎಸ್ಎಸ್ ಗೌರವ ಅಧ್ಯಕ್ಷ ರಾಘವೇಂದ್ರ ಬಿನ್ನಾಳ, ಮುಖಂಡರಾದ ನಿತೀಶ್ ಗಟ್ಟೆನ್ನವರ, ಕರುನಾಡ ಗರ್ಜನೆ ಸಂಪಾದಕ ಶೌಕತ್ ಕಾತರಕಿ ಹಾಗೂ ನಗರದ ಯುವಕರು ಉಪಸ್ಥಿತರಿದ್ದರು.