ಮನುಕುಲದ ಭವಿಷ್ಯ ಚೆನ್ನಾಗಿರಬೇಕಾದರೆ ಜೀವ ವೈವಿಧ್ಯತೆ ಕಾಪಾಡಿಕೊಳ್ಳಬೇಕು. ಜೀವ ವೈವಿಧ್ಯತೆಯ ರಕ್ಷಣೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಪರಿಸರದ ರಕ್ಷಣೆ ಮಾಡುವಲ್ಲಿ ಯುವ ಜನಾಂಗ ಆಸಕ್ತಿ ವಹಿಸಬೇಕು ಎಂದು ಧಾರವಾಡ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪಾಯಿ ತಿಳಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿಯ ಎ.ಪಿ.ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆದ ಜೀವ ವೈವಿಧ್ಯತೆಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
“ರಾಷ್ಟ್ರೀಯಸೇವಾ ಯೋಜನೆಯ ಸಮರ್ಥ ಶಿಬಿರಾರ್ಥಿಗಳು ಸೇವೆಗಾಗಿ ನಾವು ಎಂಬ ಧೋರಣೆ ಅಳವಡಿಸಿಕೊಂಡು ಹಸಿರೀಕರಣ ಮಾಡುವ ಪಣ ತೊಡಬೇಕು. ದೇಶ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಯಾವಾಗಲೂ ಮುಂದಿರಬೇಕು. ಪರಿಸರ ಮಾಲಿನ್ಯ ತಡೆಯುವಲ್ಲಿ ಕಾರ್ಯೋನ್ಮುಖರಾಗಿ ಕೆಲಸ ಮಾಡಬೇಕು” ಎಂದರು.
ವಿಜಯಪುರದ ಎನ್.ಎಸ್.ಎಸ್. ಅಧಿಕಾರಿ ಎಂ.ಎಸ್.ಮುಲ್ಲಾ ಎನ್.ಎಸ್.ಎಸ್.ದ ಧ್ಯೇಯೋದ್ದೇಶಗಳು ಹಾಗೂ ಶಿಬಿರಾರ್ಥಿಗಳು ಮಾಡಬೇಕಾದ ಕೆಲಸದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಶಿರಹಟ್ಟಿಯ ವಲಯ ಅರಣ್ಯಾಧಿಕಾರಿ ರಾಮಪ್ಪ ಅವರು ಅರಣ್ಯೀಕರಣದ ಮಹತ್ವ ಕಪ್ಪತಗುಡ್ಡದ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಬಿ.ಜಿ.ಗಿರಿತಿಮ್ಮಣ್ಣವರ ಅವರು ಮಾತನಾಡಿ ಗ್ರೀನ್ ಯಾನದ ಮುಂದುವರೆದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸುತ್ತಾ ಕಾರ್ಯಕ್ರಮದ ಮಹತ್ವ ಕುರಿತು ವಿವರಿಸಿದರು.
ಯಲ್ಲಮ್ಮ ಹೊಸೂರ ಹಾಗೂ ರಾಧಿಕಾ ಪಲ್ಲೇದ ಪ್ರಾರ್ಥಿಸಿದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಎಸ್.ವೈ.ಮುಜಾವರ ಸ್ವಾಗತಿಸಿದರು. ಶ್ರೀಮತಿ ಪರಿಮಳ ವಂದನಾರ್ಪಣೆ ಮಾಡಿದರು. ಶ್ರೀಮತಿ ರಾಜೇಶ್ವರಿ ಸಂಶಿ ಕಾರ್ಯಕ್ರಮ ನಿರೂಪಿಸಿದರು.