ರಂಝಾನ್ ಸಮಯದಲ್ಲಿ ಉಪವಾಸವು ಮುಸ್ಲಿಮರಿಗೆ ಆತ್ಮಾವಲೋಕನ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಬಡವರ ಬಗ್ಗೆ ಹೆಚ್ಚಿನ ಸಹಾನುಭೂತಿಗೆ ಅವಕಾಶ ಒದಗಿಸುತ್ತದೆ ಎಂದು ಲಾಲಹುಸೇನ ಕಂದಗಲ್ಲ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
“ಈ ಅವಧಿಯು ಮುಸ್ಲಿಮರು ಅಲ್ಲಾಹನೊಂದಿಗಿನ ತಮ್ಮ ಸಂಬಂಧವನ್ನು ಗಾಢವಾಗಿಸಲು ಮತ್ತು ಪ್ರಪಂಚದಾದ್ಯಂತ ಮುಸ್ಲಿಮರು ರಂಝಾನ್ ಏಕೆ ಆಚರಿಸುತ್ತಾರೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ. ರಂಝಾನ್‌ನ ಮೂಲ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರಿಗೆ ನೀಡಲಾದ ಮೌಲ್ಯಗಳು ಮತ್ತು ಬೋಧನೆಗಳನ್ನು ಗೌರವಿಸಲು ಪ್ರಯತ್ನಿಸುತ್ತಾರೆ” ಎಂದರು.
ಅತಿಥಿಗಳಾದ ಚಿಂತಕ ಪ್ರೊ ಬಿ ಎ ಕೆಂಚರಡ್ಡಿ ಮಾತನಾಡಿ, “ಗಾಂಧಿಯವರ ಕಲ್ಪನೆಯ ರಾಮ-ರಹೀಮ ಇಂದು ನಮಗೆಲ್ಲ ಮಾದರಿಯಾಗಬೇಕು. ಸೌಹಾರ್ದ ಬದುಕೇ ನಮ್ಮ ದೇಶದ ಬೆಳವಣಿಗೆಗೆ ಮುಖ್ಯ ಕಾರಣ” ಎಂದರು.
ತಾಲೂಕು ಕಸಾಪ ಅಧ್ಯಕ್ಷ ಅಮರೇಶ ಗಾಣಗೇರ ಅವರು ಮಾತನಾಡಿ, ಗೋಗೇರಿ ಗ್ರಾಮವು ಸೌರ್ಹಾದತೆಯ ಗ್ರಾಮ. ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಹಿರಿಯರಿಗೆ ಅಭಿನಂದನೆ ತಿಳಿಸಿದರು.
ಬಸವರಾಜ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, “ಇಂತಹ ಒಳ್ಳೆಯ ಕಾರ್ಯಗಳು ಅನೇಕ ಪಟ್ಟು ಪ್ರತಿಫಲವನ್ನು ನೀಡುತ್ತವೆ. ನಾವೆಲ್ಲ ಸೌಹಾರ್ದತೆಯಿಂದ ಬದುಕೋಣ ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿ: ಶಾಸಕ ಶ್ರೀನಿವಾಸ ಮಾನೆ
ಮುಖ್ಯೋಪಾಧ್ಯಯ ಆರ್ ಐ ಭಗವಾನ್ ಕುರ್‌ಆನ್ ಪಠಣ ಮಾಡಿದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಈರಣ್ಣ ಮೂಲಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಾಫಿಜ್ ಫಾರೂಕ ಇಲಕಲ್ಲ, ಶಂಕ್ರಯ್ಯ ಮೇಟಿಮಠ, ಮಹೆಬೂಬ ಭಗವಾನ್, ಮಹಾಂತೇಶ ಹಿರೇಕುರಬರ ಮಾಬುಸಾಬ ನಧಾಪ್, ಹುಚ್ಚುಸಾಬ ಬಡಿಗೇರ, ಕೆ ಕೆ ಭಗವಾನ್, ಐ ಎಚ್ ಭಗವಾನನ್ ಇದ್ದರು.