ಗದಗ ಮಾರ್ಚ್ 6ರಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಚಿರಂಜೀವ್ ಸಿಂಗ್ ಹಾಗೂ ಸಿ ನಾರಾಯಣಸ್ವಾಮಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ, ಗ್ರಾವೀಣಾಭಿವೃದ್ಧಿ ಚೇತನ ಬಿರುದು.
ಗದಗನ ನಾಗಾವಿಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ವಿಶ್ವ ವಿದ್ಯಾಲಯದ 4ನೇ ಘಟಿಕೋತ್ಸವವನ್ನು ಮಾ. 6ರಂದು ಬೆಳಿಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ವಿಷ್ಣುಕಾಂತ ಚಟಪಲ್ಲಿ ತಿಳಿಸಿದ್ದಾರೆ.
ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದಲ್ಲಿ ಮಂಗಳವಾರ (ಮಾ.5) ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಯೇ ನಮ್ಮ ಸಂಕಲ್ಪ ಘೋಷವಾಕ್ಯದಡಿ, ಜರುಗುವ 4ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ, ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಮಾಜಿ ಜಂಟಿ ಕಾರ್ಯದರ್ಶಿಗಳಾದ ಡಾ. ಟಿ.ಆರ್. ರಘುನಂದನ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
4ನೇ ಘಟಿಕೋತ್ಸವದಲ್ಲಿ 10 ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳ 239 ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೋಮಾ 5 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪದವಿ ಪ್ರದಾನ ಮಾಡಲಾಗುವುದು. ಅದರಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತ್ಯಧಿಕ ಅಂಕಗಳಿಸಿದ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಎರಡು ಮತ್ತು ಮೂರನೇ ರ್ಯಾಂಕ್‌ಗಳಿಸಿದ 10 ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರು.
ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ: ಪಂಜಾಬ್ ಪ್ರಾಂತದಿಂದ ಕರ್ನಾಟಕಕ್ಕೆ ಆಗಮಿಸಿ ಕನ್ನಡ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅಚ್ಚ ಕನ್ನಡಿಗರಾಗಿ ಸಾರ್ಥಕ ಜೀವನ ನಡೆಸಿಕೊಂಡು ಬಂದಿರುವ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಗೌರವ ಪದವಿ ಹಾಗೂ ಸಹಕಾರ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರದ ವಿಕೇಂದ್ರೀಕರಣಗೊಳಿಸುವ ಹಾಗೂ ನೀತಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯದ 5ನೇ ಹಣಕಾಸು ಅಯೋಗದ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ನಾರಾಯಣಸ್ವಾಮಿ ಅವರಿಗೆ ಡಾಕ್ಟರ್ ಆಫ್ ಲಾಸ್ (ಎಲ್.ಎಲ್.ಡಿ) ಗೌರವ ಪದವಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ. ಸುರೇಶ ನಾಡಗೌಡರ, ವಾರ್ತಾಧಿಕಾರಿ ವಸಂತ ಬಿ.ಮಡ್ಲೂರ ಇದ್ದರು.