ಗದಗ | ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿವೆ ಅಂಗನವಾಡಿಗಳು; ಮುಕ್ತಿ ಯಾವಾಗ?

Date:

Advertisements

ರಾಜ್ಯದಲ್ಲಿರುವ ಅಂಗನವಾಡಿಗಳ ಸ್ಥಿತಿಗತಿಗಳ ಬಗ್ಗೆ ಈ ದಿನ.ಕಾಮ್ ಪ್ರಕಟಿಸುತ್ತಿರುವ ಸರಣಿ ವರದಿಯ ಭಾಗ-3

ಗದಗ ಜಿಲ್ಲೆಯ ರೋಣ ತಾಲೂಕಿನ ಅಂಗನವಾಡಿಗಳ ಸ್ಥಿತಿ ಹೇಗಿದೆ ಎಂದು ಈ ದಿನ. ಕಾಮ್ “ರಿಯಾಲಿಟಿ ಚೆಕ್ ಮಾಡಿತು. ಸದ್ಯ ಈ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 316 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪೈಕಿ ಬಾಡಿಗೆ ಕಟ್ಟಡದಲ್ಲಿ 57 ಅಂಗನವಾಡಿಗಳು ಕಾರ್ಯಾಚರಿಸುತ್ತಿದೆ. ಇವುಗಳಲ್ಲಿ 298 ಶಿಕ್ಷಕಿಯರು ಕಾರ್ಯ ನಿರ್ವಹಿಸುತ್ತಿದ್ದು, 18 ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರೇ ಇಲ್ಲ, ಸಹಾಯಕಿ(ಆಯಾ)ಯರೇ ಖುದ್ದು ಅಂಗನವಾಡಿಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ.

ಕೆಲವು ಅಂಗನವಾಡಿಗಳಲ್ಲಿ ಟೀಚರ್ ಹಾಗೂ ಸಹಾಯಕಿ (ಆಯಾ) ಕೂಡ ಇಲ್ಲದೆ, ಪಕ್ಕದ ಅಂಗನವಾಡಿ ಟೀಚರ್ ಅಥವಾ ಸಹಾಯಕಿಯರು ಬಂದು ಅಡುಗೆ ಜೊತೆಗೆ ಕಲಿಸುವ ಅನಿವಾರ್ಯತೆ ಇದೆ.

Advertisements

‘ಡ ಸ ಹಡಗಲಿ ಗ್ರಾಮ’ದಲ್ಲಿ ಸುಮಾರು ಮೂರು ಅಂಗನವಾಡಿ ಕೇಂದ್ರಗಳಿದ್ದು, ಎರಡು ಸ್ವಂತ ಕಟ್ಟಡಗಳಲ್ಲಿದ್ದರೆ, ಒಂದು ಸರಕಾರಿ ಶಾಲಾ ಕೊಠಡಿಯಲ್ಲಿ ನಡೆಸುತ್ತಿದ್ದಾರೆ. ಈ ಪೈಕಿ ಒಂದು ಅಂಗಡಿನವಾಡಿಯಲ್ಲಿ ನೀರಿನ ಸಮಸ್ಯೆ. ಮೋಟಾರು ಪಂಪು ಕೈಕೊಟ್ಟಿರುವುದರಿಂದ ಇಲ್ಲಿಗೆ ನೀರನ್ನು ಹೊತ್ತುಕೊಂಡೇ ತರಬೇಕು ಎನ್ನುತ್ತಾರೆ ಸಹಾಯಕಿ.

“ಹಳೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ. ಒಂದು ವರ್ಷದಿಂದ ಕನ್ನಡ ಶಾಲೆಯ ಒಂದು ಕೊಠಡಿಯಲ್ಲಿಯೇ ಅಂಗನವಾಡಿ ನಡೆಸುತ್ತಿದ್ದೇವೆ. ಅಲ್ಲೇ ಇರುವ ಸಣ್ಣ ಜಾಗದಲ್ಲಿ ಅಡುಗೆಯನ್ನೂ ಮಾಡುತ್ತಾ ಬಂದಿದ್ದೇವೆ” ಎಂದು ಶಿಕ್ಷಕಿ ಸಲ್ಮಾ ಮುಲ್ಲಾ ಹೇಳಿದರು.

Anganawadi 1

ಗುಜಮಾಗಡಿ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಒಂದರಲ್ಲಿ ಎರಡು ವರ್ಷಗಳಿಂದ ಅಂಗನವಾಡಿ ಶಿಕ್ಷಿಕಿಯೇ ಇಲ್ಲ. ಅಡುಗೆ ಸಹಾಯಕಿಯೇ ಮಕ್ಕಳಿಗೆ ಅಡುಗೆ ಮಾಡುತ್ತಾ ಜೊತೆಗೆ ಟೀಚರ್ ಕೆಲಸವನ್ನೂ ಮಾಡುತ್ತಿದ್ದಾರೆ.

ಇನ್ನೊಂದು ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಹತ್ತು ಹನ್ನೆರಡು ವರ್ಷಗಳ ಹಿಂದೆ ಹೊಸ ಕಟ್ಟಡ ನಿರ್ಮಾಣವಾಗಿದ್ದು, ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿದೆ. ಹೀಗಾಗಿ, ನಾಲ್ಕು ವರ್ಷದಿಂದ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ. ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ, ಮಕ್ಳಳನ್ನು ಬಯಸು ಶೌಚಾಲಯಕ್ಕೆ ಕರೆದುಕೊಂಡು ಹೋಗಬೇಕಾದ ದುಸ್ಥಿತಿ ಸಹಾಯಕಿಯರದ್ದು.

“ಬಾಡಿಗೆ ಸರಿಯಾಗಿ ಕೊಡದಿರುವುದರಿಂದ ಟೀಚರೇ ಬಾಡಿಗೆ ಕೊಡುತ್ತಿದ್ದಾರೆ. ತಿಂಗಳು ತಿಂಗಳು ಸರಿಯಾಗಿ ಬಾಡಿಗೆ ಕೊಡದಿರುವುದರಿಂದ ಮನೆಯ ಮಾಲೀಕರು ಮನೆ ಬಿಟ್ಟು ಹೋಗಿ ಎಂದು ಒತ್ತಡ ಹಾಕುತ್ತಿದ್ದಾರೆ” ಎಂದು ಅಡುಗೆ ಸಹಾಯಕಿ ತಮ್ಮ ನೋವು ತೋಡಿಕೊಂಡರು.

ಕುರುಡಗಿ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಕನ್ನಡ ಶಾಲಾ ಆವರಣದಲ್ಲಿ ಸ್ವಂತ ಕಟ್ಟಡಗಳಿವೆ. ಎರಡು ಅಂಗನವಾಡಿ ಕೇಂದ್ರಗಳ ಮುಂದೆ ಮಳೆಯಿಂದ ನೀರು ನಿಂತು ಕೆಸರಾಗಿದ್ದು, ಹುಲ್ಲು ಬೆಳೆದಿದೆ. ಅಂಗನವಾಡಿ ಹಿಂದೆ ಕಾಂಪೌಂಡ್ ಬಿದ್ದಿರುವುದರಿಂದ ದನಕರುಗಳು ಕೂಡ ಒಳಗಡೆ ನುಗ್ಗುತ್ತಿವೆ. ಇದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿರುವುದು ಕಂಡು ಬಂದಿದೆ.

ಎರಡು ಅಂಗನವಾಡಿಗೆ ಒಬ್ಬರೇ ಅಡುಗೆ ಸಹಾಯಕಿ

ಯರೇಬೆಲೇರಿ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿಗೆ ಒಬ್ಬರೇ ಅಡುಗೆ ಸಹಾಯಕಿ ಇದ್ದಾರೆ. ಎರಡು ದಿನ ಒಂದು ಕಡೆ ಅಡುಗೆ ಮಾಡಿದರೆ, ಇನ್ನೆರಡು ದಿನ ಇನ್ನೊಂದಿ ಕೇಂದ್ರದಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಉಳಿದ ಎರಡು ದಿನ ಟೀಚರ್ ಅಡುಗೆ ಮಾಡುವ ಸ್ಥಿತಿ ಇರುತ್ತದೆ.

ಎಸ್ ಸಿ ಕಾಲೋನಿಯಲ್ಲಿ ಇರುವ ಅಂಗನವಾಡಿ ಕೇಂದ್ರದ ಕಾಂಪೌಂಡ್ ಕುಸಿದು ಬಿದ್ದು ಕೆಲ ವರ್ಷಗಳಾಗಿವೆ. ಆದರೆ ಇನ್ನೂ ರಿಪೇರಿ ಆಗಿಲ್ಲ. ಮಾರು ದೂರ ಶೌಚಾಲಯ ದೂರ ಕಟ್ಟಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕಿಯರಿಗೆ ಶೌಚಾಲಯಕ್ಕೆ ತೆರಳುವುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.

“ನಮ್ಮ ಅಂಗನವಾಡಿ ಕೇಂದ್ರದ ಕಿಟಕಿ, ಬಾಗಿಲುಗಳು ಹಾಳಾಗುವ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಕಿತ್ತು ಹೋದರೆ, ಸಮಸ್ಯೆ ಉಂಟಾಗುತ್ತದೆ. ವಾಟರ್ ಪ್ಯೂರಿಫೈಯ್ಯರ್‌ಗೆ ಸರಿಯಾಗಿ ನೀರಿನ ಜೋಡಣೆ ಮಾಡದೇ ಇರುವುದರಿಂದ ಗ್ರಾಮದ ಶುದ್ಧ ನೀರಿನ ಘಟಕಕ್ಕೆ ಹೋಗಿ ನೀರು ತರುತ್ತೇವೆ” ಎಂದು ಶಿಕ್ಷಕಿ ರೇಣುಕಾ ಕೆರಿ ಮಾಹಿತಿ ನೀಡಿದ್ದಾರೆ.

ಅಂಗನವಾಡಿ 1 1
ಹನುಮಂತನ ಗುಡಿಯ ಕಟ್ಟಡದಲ್ಲಿರುವ ಅಂಗನವಾಡಿ

20 ವರ್ಷಗಳಿಂದ ಹನುಮಂತನ ಗುಡಿಯ ಕಟ್ಟಡದಲ್ಲಿಯೇ ಅಂಗನವಾಡಿ

ರೋಣ ತಾಲೂಕಿನಲ್ಲಿಯೇ ದೊಡ್ಡ ಗ್ರಾಮ ಅಬ್ಬಿಗೇರಿ. ಈ ಗ್ರಾಮದಲ್ಲಿ ಒಟ್ಟು ಹನ್ನೊಂದು ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ ಐದು ಸ್ವಂತ ಕಟ್ಟಡಗಳಿದ್ದು, ಆರು ಅಂಗನವಾಡಿಗಳು ಬಾಡಿಗೆ ಮನೆಯಲ್ಲಿದೆ. ಒಂದು ಅಂಗನವಾಡಿಗೆ ಇನ್ನೂ ಕೂಡ ಟೀಚರ್ ನೇಮಕವಾಗಿಲ್ಲ.

ಇಲ್ಲಿರುವ ಒಂದು ಅಂಗನವಾಡಿ ಕೇಂದ್ರವು ಕಳೆದ 20 ವರ್ಷಗಳಿಂದ ಹನುಮಪ್ಪನ ಗುಡಿಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಮಕ್ಕಳಿಗೆ ಆಟವಾಡಲು ಸರಿಯಾದ ಆಟದ ಜಾಗವಿಲ್ಲ. ಶೌಚಾಲಯ ಕೂಡ ಇಲ್ಲ. ಸಣ್ಣ ಕೊಠಡಿ. ತುಂಬಾ ಇಕ್ಕಟ್ಟಿನಲ್ಲಿಯೇ ಮಕ್ಕಳು ಕುಳಿತುಕೊಳ್ಳುವ  ದುಸ್ಥಿತಿ. ಕಲಿಕಾ ಸಾಮಗ್ರಿಗಳನ್ನು ಇಡಲು ಕೂಡ ಸರಿಯಾದ ವ್ಯವಸ್ಥೆ ಇಲ್ಲ.

ತಗಡಿನ ಶೆಡ್ಡಿನಲ್ಲಿ ಅಂಗನವಾಡಿ

ಅಬ್ಬಿಗೇರಿ ಗ್ರಾಮದಲ್ಲಿರುವ ಒಂದು ಅಂಗನವಾಡಿ ತಗಡಿನ ಶೆಡ್‌ನಲ್ಲಿ ನಡೆಯುತ್ತಿದೆ. ಸುಮಾರು ಏಳು ಎಂಟು ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿಯೇ ಮಕ್ಕಳನ್ನು ಕುಳ್ಳಿರಿಸಿಕೊಳ್ಳಲಾಗುತ್ತಿದೆ. ಈ ಶೆಡ್ಡಿನ ವರಾಂಡದಲ್ಲಿಯೇ ಗ್ಯಾಸ್ ಸಿಲಿಂಡರ್ ಇಟ್ಟು, ಅಡುಗೆ ಸಹಾಯಕಿ ಅಡುಗೆ ತಯಾರು ಮಾಡುತ್ತಾರೆ. ಅಪಾಯ ಹತ್ತಿರವೇ ಇದ್ದರೂ, ಬೇರೆ ದಾರಿ ಅಂಗನವಾಡಿ ಶಿಕ್ಷಕರ ಮುಂದಿಲ್ಲ.

‘ಅಂಗನವಾಡಿ ನಡೆಸಲೆಂದು ಬೇರೆ ಬಾಡಿಗೆ ಮನೆ ಕೇಳಿದರೆ ಯಾರೂ ಕೊಡುತ್ತಿಲ್ಲ’ ಎಂದು ಶಿಕ್ಷಕಿ ದುರಗಮ್ಮ ಮಾದರ್ ನೋವು ತೋಡಿಕೊಂಡಿದ್ದಾರೆ.

“ಅಂಗನವಾಡಿ ಆರಂಭದಿಂದ ಬಸವೇಶ್ವರ ದೇವಸ್ಥಾನದಲ್ಲಿ ಸುಮಾರು ಹದಿನೈದು ಇಪ್ಪತು ವರ್ಷಗಳಿಂದ ಇದ್ದೆವು. ದೇವಸ್ಥಾನದಲ್ಲಿ ಇರಬಾರದೆಂದು ಅದೇಶ ಬಂದ ಮೇಲೆ ಬಾಡಿಗೆ ಮನೆಯಲ್ಲಿ ನಡೆಸುತ್ತಿದ್ದೇವೆ. ಇಷ್ಟು ವರ್ಷಗಳಾದರೂ ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ” ಎನ್ನುತ್ತಿದ್ದಾರೆ ಅಬ್ಬಿಗೇರಿ ಗ್ರಾಮದ ಅಂಗನವಾಡಿ ಶಿಕ್ಷಕಿ ಟೀಚರ್ ಎಸ್‌ಬಿ ಗುಗ್ಗರಿ.

ಅಬ್ಬಿಗೇರಿ ಗ್ರಾಮದ ಗಂಗಾ ನಗರದಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರ ಆರಂಭವಾಗಿದ್ದು, ಸ್ವಂತ ಕಟ್ಟಡ ಇರುವುದಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ಒಬ್ಬರು ಅಡುಗೆ ಸಹಾಯಕಿ ಇದ್ದಾರೆ. ಟೀಚರ್ ಇಲ್ಲದಿರುವುದರಿಂದ ಪಕ್ಕದ ಅಂಗನವಾಡಿಯ ಟೀಚರ್ ಈ ಅಂಗನವಾಡಿಗೆ ಬಂದು ಮಕ್ಕಳಿಗೆ ಕಲಿಸುತ್ತಾರೆ. ಈ ಅಂಗನವಾಡಿಯ ಸಮೀಪವೇ ಮುಳ್ಳುಗಂಠಿ ಬೆಳೆದಿದೆ. ಚರಂಡಿಯ ನೀರು ಅಂಗನವಾಡಿಯ ಮುಂದೆಯೇ ಹರಿಯುತ್ತಿರುತ್ತದೆ. ಸ್ವಚ್ಛತೆ ಮರೀಚಿಕೆ ಆಗಿದೆ.

ಅಂಗನವಾಡಿ 3 2
ನ್ಯಾಯಬೆಲೆ ಅಂಗಡಿಯಲ್ಲಿ ಅಂಗನವಾಡಿ ಕೇಂದ್ರ

ಗ್ರಾಮದ ನರೇಗಲ್ ಗೆ ಹೋಗುವ ರಸ್ತೆಯಲ್ಲಿರುವ ಅಂಗನವಾಡಿಯಲ್ಲಿ ಶೌಚಾಲಯವಿದೆ. ಆದರೆ ಬಾಗಿಲು ಮುರಿದು ಹೋಗಿರುವುದರಿಂದ ಬಳಕೆ ಮಾಡುತ್ತಿಲ್ಲ. ಅಂಗನವಾಡಿ ಶಿಕ್ಷಕಿಯರ ಮಕ್ಕಳಿಗಾಗಿ ಬಯಲನ್ನೇ ಆಶ್ರಯಿಸಿಕೊಂಡಿದ್ದಾರೆ.

ಸ್ವಂತ ಕಟ್ಟಡಗಳಿರುವ ಅಂಗನವಾಡಿ ಕೇಂದ್ರಗಳಲ್ಲಿ ಬಹುತೇಕ ಶೌಚಾಲಯದ ಸಮಸ್ಯೆಗಳು ಎದ್ದು ಕಾಣುತ್ತವೆ. ಹತ್ತು ವರ್ಷದ ಹಿಂದೆಯೇ ಹೊಸದಾದ ವಾಟರ್ ಪ್ಯೂರಿಫೈಯ್ಯರ್‌ಗಳನ್ನು ಅಳವಡಿಸಿದ್ದು, ಈಗ ಕೆಟ್ಟು ನಿಂತಿರುವುದರಿಂದ ಶುದ್ದ ಕುಡಿಯುವ ನೀರಿನ ಸಂಪರ್ಕ ಇಲ್ಲ. ಆಟದ ಜಾಗ ವಿದ್ದರೂ ಕಸ ಕಡ್ಡಿ, ಹುಲ್ಲು ಬೆಳೆದು ಆಟದ ಜಾಗವೇ ಮಾಯವಾಗಿದೆ.

ಅಬ್ಬಿಗೇರಿ
ಅಬ್ಬಿಗೇರಿ ಅಂಗನವಾಡಿಯ ಶೌಚಾಲಯದ ಬಾಗಿಲು ಮುರಿದಿರುವುದು

“ಮಳೆಗಾಲದಲ್ಲಿ ರಸ್ತೆ ಹದಗೆಟ್ಟು ಕೆಸರಾಗಿರುತ್ತದೆ. ಇದರ ನಡುವೆ ಮಕ್ಕಳನ್ನು ಕಷ್ಟದಿಂದ ಕರೆದುಕೊಂಡು ಬರುತ್ತೇವೆ. ಒಂದು ಕಿಲೋ ಮೀಟರ್ ದೂರ ಹೋಗಿ ಕುಡಿಯುವ ನೀರು ತರಬೇಕು” ಎಂದು ಅಡುಗೆ ಸಹಾಯಕಿಯರು ತಮ್ಮ ನೋವು ತೋಡಿಕೊಂಡಿದ್ದಾರೆ.

ಕನ್ನಡ ಶಾಲೆಯ ಕೊಠಡಿಗಳೇ ಅಂಗನವಾಡಿಗಳಿಗೆ ಆಶ್ರಯ

ತಾಲೂಕಿನ ಎರಡನೇ ದೊಡ್ಡ ಗ್ರಾಮ ಸವಡಿ. ಗ್ರಾಮದಲ್ಲಿ ಒಂಬತ್ತು ಅಂಗನವಾಡಿ ಕೇಂದ್ರಗಳಿದ್ದು, ಆರು ಸ್ವಂತ ಕಟ್ಟಡಗಳು, ಎರಡು ಕನ್ನಡ ಸರಕಾರಿ ಶಾಲೆಯಲ್ಲಿ, ಒಂದು ಹಳೆ ಉರ್ದು ಶಾಲೆಯಲ್ಲಿ ನಡೆಯುತ್ತಿದೆ. ಒಂದರಲ್ಲಿ ಟೀಚರ್ ಹಾಗೂ ಅಡುಗೆ ಸಹಾಯಕಿ ಇಬ್ಬರು ಇರುವುದಿಲ್ಲ.

ಎಸ್‌ಸಿ ಕಾಲೋನಿಯಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಒಂದು ಅಂಗನವಾಡಿ ಕೇಂದ್ರಕ್ಕೆ ಕಟ್ಟಡವಿದೆ. ಇನ್ನೊಂದಕ್ಕೆ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡು ಏಳು ವರ್ಷಗಳು ಆದರೂ ಇದುವರೆಗೂ ಕಟ್ಟಡ ಕಾಮಗಾರಿ ಮುಗಿದಿಲ್ಲ.

“ಕಟ್ಟಡದ ಕಾಮಗಾರಿ ಪೂರ್ತಿಯಾಗಲು ಇನ್ನೂ ಎಷ್ಟು ವರ್ಷ ಆಗುತ್ತೋ ಏನೋ ಗೊತ್ತಿಲ್ಲ. ಸದ್ಯಕ್ಕೆ ಕನ್ನಡ ಶಾಲೆಯಲ್ಲಿ ಮಕ್ಕಳನ್ನು ಇಟ್ಟುಕೊಂಡಿದ್ದೇವೆ. ಅವರು ಕೂಡ ಆದಷ್ಟು ಶೀಘ್ರ ಜಾಗ ಖಾಲಿ ಮಾಡಿ ಅಂತ ಒತ್ತಡ ಹೇರುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳ್ಳನ್ನು ಎಲ್ಲಿಗೆ ಕರ್ಕೊಂಡು ಹೋಗಲಿ” ಎಂದು ಅಡುಗೆ ಸಹಾಯಕಿ ಭಾರತಿ ಹುಣಸಿಮರದ ಹೇಳಿದರು.

ಒಟ್ಟಾರೆಯಾಗಿ ಈ ದಿನ.ಕಾಮ್ ರಿಯಾಲಿಟಿ ಚೆಕ್ ಮಾಡಿದಾಗ ಕಂಡು ಬಂದಿದ್ದು, ಸ್ವಂತ ಕಟ್ಟಡ ಇರುವ ಅಂಗನವಾಡಿಗಳಲ್ಲಿ ಬಹುತೇಕ ಮೂಲಭೂತ ಸೌಕರ್ಯಗಳೇ ಇಲ್ಲ. ಕುಡಿಯುವ ನೀರಿನ ಸಮಸ್ಯೆ, ಆಟದ ಮೈದಾನ, ಕಲಿಕಾ ಸಾಮಗ್ರಿಗಳ ಕೊರತೆ ಇದೆ.

ಅಂಗನವಾಡಿ 4 2

ಈ ಕುರಿತು ಈ ದಿನ.ಕಾಮ್‌ನೊಂದಿಗೆ ಸಿಐಟಿಯು ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ ಮಾತನಾಡಿ, “ICDS ಯೋಜನೆ ಪ್ರಾರಂಭವಾಗಿ 45 ವರ್ಷಗಳಾದರೂ ಈ ಯೋಜನೆಗಳಲ್ಲಿ ಕೆಲಸ ಮಾಡುವವರ ಬವಣೆ ಇನ್ನೂ ತಪ್ಪಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ನೌಕರರು 100 ರೂಳಿಂದ ಕೆಲಸ ಮಾಡ್ತಾ ಬಂದಿದ್ದಾರೆ. ಅವರಿಗೆ ಆರ್ಥಿಕ ಭದ್ರತೆ ಇಲ್ಲ. ಅಂಗನವಾಡಿಗಳಿಗೆ ಕಟ್ಟಡ ಇದ್ದರೂ ಮೂಲಭೂತ ಸೌಕರ್ಯಗಳಿಲ್ಲ. ಬಾಡಿಗೆ ಮನೆ, ದೇವಸ್ಥಾನಗಳಲ್ಲಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಸಾವಿರಾರು ಕೋಟಿ ಹಣ ಖರ್ಚು ಮಾಡುವ ಸರ್ಕಾರ ಈ ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ಅಂಗನವಾಡಿಗಳ ಅಭಿವೃದ್ದಿ ಮಾಡಲು ಕೂಡ ಯೋಜನೆ ರೂಪಿಸಿಲಿ” ಎಂದರು.

ಈ ದಿನ.ಕಾಮ್ ರೋಣ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿರೂಪಾಕ್ಷಯ್ಯ ಹಿರೇಮಠ್ ಅವರನ್ನು ಫೋನ್ ಮೂಲಕ ಐದಾರು ಬಾರಿ ಸಂಪರ್ಕಿಸಲು ಯತ್ನಿಸಿತಾದರೂ, ಅವರು ಕರೆ ಸ್ವೀಕರಿಸಿಲ್ಲ.

ಎಲ್ಲ ಅಂಗನವಾಡಿ ಶಿಕ್ಷಕಿಯರಿಗೆ ಕೇವಲ ಹತ್ತು ಸಾವಿರ ಹಾಗೂ ಅಡುಗೆ ಸಹಾಯಕಿಯರಿಗೆ ಆರು ಸಾವಿರ ವೇತನ ನೀಡಲಾಗುತ್ತಿದೆ. ಈ ವೇತನವನ್ನು ಹೆಚ್ಚಳ ಮಾಡಬೇಕೆಂಬುದು ಅವರ ಮಾತುಗಳಲ್ಲಿ ಕೇಳಿಬಂತು.

ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಮೂಲಭೂತ ಸೌಕರ್ಯವಿರುವ ಸ್ವಂತ ಕಟ್ಟಡವನ್ನು ನಿರ್ಮಿಸಿ, ಮುಕ್ತಿ ನೀಡುವರೇ ಎಂದು ಕಾದು ನೋಡಬೇಕಿದೆ.

ಅಂಗನವಾಡಿ 2 2

ಸವಡಿ

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X