ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಜನವರಿ 19 ರಿಂದ 25ರವರೆಗೆ ಗದಗ ಜಿಲ್ಲೆಯಾದ್ಯಂತ ರೂಟ್ ಮಾರ್ಚ್ ನಡೆಸಲು ಆರ್‌ಎಎಫ್ ತಂಡ ನಗರಕ್ಕೆ ಆಗಮಿಸಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಅಲ್ಲಿನ ಮಾಹಿತಿ ಪಡೆಯುವುದು ಈ ರೂಟ್ ಮಾರ್ಚ್‌ನ ಉದ್ದೇಶವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ತಿಳಿಸಿದರು.
ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಜರುಗಿದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
“ಆರ್‌ಎಎಫ್ ತಂಡ ಜಿಲ್ಲೆಗೆ ಕರ್ತವ್ಯಕ್ಕೆ ಆಗಮಿಸಿದಾಗ ಸ್ಥಳ ಹಾಗೂ ಇಲ್ಲಿನ ವಾತಾವರಣ, ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯಲು ಈ ತಂಡವು ಆಗಮಿಸಿದ್ದು, ಜಿಲ್ಲೆಯ ಪ್ರಮುಖ ನಗರ ಹಾಗೂ ಶಹರ ವ್ಯಾಪ್ತಿಯಲ್ಲಿ ಪಥಸಂಚಲನ ಜರುಗಿಸಲಾಗುವುದು. ಆರ್‌ಎಎಫ್ ತಂಡಕ್ಕೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಾವು ನಿರ್ವಹಿಸುವ ಸ್ಥಳ ಅಪರಿಚಿತವಾಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜಿಲ್ಲೆಗೆ ಆಗಮಿಸಿದ ಆರ್‌ಎಎಫ್ ತಂಡಕ್ಕೆ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು” ಎಂದರು.
“80 ಮಂದಿ ಪುರುಷರು ಹಾಗೂ 7 ಮಂದಿ ಮಹಿಳಾ ಸೈನಿಕರ ಆರ್‌ಎಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಈ ತಂಡವು ಜನವರಿ 20 ರಂದು ಲಕ್ಷ್ಮೇಶ್ವರ, ಮುಳಗುಂದ ಹಾಗೂ ಜನವರಿ 21 ರಂದು ನರಗುಂದ, ಜನವರಿ 22 ರಂದು ಮುಂಡರಗಿ, ಜನವರಿ 23 ರಂದು ರೋಣ, ಗಜೇಂದ್ರಗಡ, ಜನವರಿ 24 ರಂದು ಶಿರಹಟ್ಟಿ, ಬೆಟಗೇರಿ, ಜನವರಿ 25 ರಂದು ಗದಗ ಪೊಲೀಸ್ ಹಾಗೂ ಸಿವಿಲ್ ಪೊಲೀಸ್ ನಡುವೆ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ” ಎಂದು ಎಸ್‌ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದರು.
ತಂಡದ ಅಸಿಸ್ಟಂಟ್ ಕಮಾಂಡೆಂಟ್ ಪ್ರದೀಪ್ ಡಿ ಟಿ ಮಾತನಾಡಿ, “ಯಾವುದೇ ಒತ್ತಡಗಳಿಗೆ ಒಳಗಾಗದೇ ಜನರ ನಾಡಿಮಿಡಿತ, ಇಲ್ಲಿನ ಸಂಸ್ಕೃತಿ ತಿಳಿಯುವ ಹಾಗೂ ಜನರ ವಿಶ್ವಾಸ ಗಳಿಸುವ ಉದ್ದೇಶದೊಂದಿಗೆ ಈ ರೂಟ್ ಮಾರ್ಚ್ ಜರುಗಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಗುರಿ ಇಲ್ಲದ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ: ಗೌತಮ್ ರೆಡ್ಡಿ
ಪತ್ರಿಕಾಗೋಷ್ಟಿಯಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಬಿ ಸಿ ರಾಯ್, ಡಿಎಸ್‌ಪಿ ವಿದ್ಯಾನಂದ ನಾಯಕ, ಸಿಪಿಐ ಡಿ ಬಿ ಪಾಟೀಲ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಟಿ ನಂತರ ಆರ್‌ಎಎಫ್ ತಂಡದಿಂದ ಶಹರ ಠಾಣೆಯಿಂದ ಪ್ರಾರಂಭವಾದ ರೂಟ್ ಮಾರ್ಚ್ ಡಿಸಿ ಮೀಲ್ ರೋಡ್, ಜವಳಗಲ್ಲಿ, ಕೆ ಎಚ್ ಪಾಟೀಲ್ ಸರ್ಕಲ್, ಗಂಗಾಪುರ ಪೇಟೆ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಶಹರ ಠಾಣೆಗೆ ಬಂದು ಮುಕ್ತಾಯಗೊಂಡಿತು.