ಮೇ 9ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗುತ್ತಿವೆ. ಎರಡು ತಿಂಗಳ ವಿರಾಮದ ಬಳಿಕ, ಮಕ್ಕಳು ಮತ್ತೆ ಶಾಲೆಗಳಿಗೆ ಹೊರಟಿದ್ದಾರೆ. ಶಾಲೆಗಳಲ್ಲಿ ಸಂಭ್ರಮದ ವಾತಾವರಣವಿದೆ. ಹಲವು ಶಾಲೆಗಳಲ್ಲಿ ಸಂಭ್ರಮಾಚರಣೆ ಮಾಡಿ, ವಿದ್ಯಾರ್ಥಿಗಳಿಗೆ ಶಾಲೆಗೆ ಬರಮಾಡಿಕೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಶಾಲೆಯೊಂದರ ಶಾಲಾ ಬಸ್ ಅಪಘಾತಕ್ಕೀಡಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಆರ್.ಕೆ ನಗರ ಬಳಿಯ ಅಂಡರ್‌ಪಾಸ್‌ನಲ್ಲಿ ಶ್ರೀಪಾರ್ಶ್ವನಾಥ ಆಂಗ್ಲ ಮಾಧ್ಯಮದ ಶಾಲೆಯ ಬಸ್ ಪಲ್ಟಿಯಾಗಿದೆ. ಬಸ್‌ಗೆ ಹಿಂದಿನಿಂದ ಕ್ಯಾಂಟರ್‌ವೊಂದು ಡಿಕ್ಕಿ ಹೊಡೆದಿದ್ದರಿಂದ, ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಬಸ್‌ನಲ್ಲಿ ಯಾವುದೇ ಮಕ್ಕಳು ಇಲ್ಲದ್ದರಿಂದ, ಭೀಕರ ಘಟನೆಯೊಂದು ತಪ್ಪಿದೆ. ಗಾಯಾಳು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.