“ದಲಿತ ಸಂಘಟನೆಗಳ ಒತ್ತಾಯಕ್ಕೆ ಮಣಿದು ಎಸ್ ಸಿ ಎಸ್ ಪಿ /ಟಿ ಎಸ್ ಪಿ ಕಾಯ್ದೆಯ ʼ7ಡಿʼ ಸೆಕ್ಷನ್ ರದ್ದುಪಡಿಸಿದಂತೆ ʼ7ಸಿʼ ಯನ್ನೂ ರದ್ದುಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿಯು ಸರ್ಕಾರವನ್ನು ಒತ್ತಾಯಿಸುತ್ತದೆ. ಹಾಗೂ ಸಂವಿಧಾನ ವಿಧಿ 46ರ ಆಶಯವನ್ನು ಪಾಲಸಬೇಕು” ಎಂದು ಡಿ ಎಸ್ ಎಸ್ ಮುಖಂಡ ಶರೀಫ್ ಬಿಳಿಯಲಿ ಆಗ್ರಹಿಸಿದರು.
ಗದಗ ಪಟ್ಟಣದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ದಲಿತ ಸಂಘರ್ಷ ಸಮಿತಿ ಚಳವಳಿಯ ಒತ್ತಾಸೆಯಿಂದಾಗಿ 2013-14 ರಲ್ಲಿ ಸಿದ್ಧರಾಮಯ್ಯನವರ ಸರ್ಕಾರವೇ ಜಾರಿಗೆ ತಂದ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಯೋಜನೆಯ ಕಾಯ್ದೆಯು ತನ್ನ ಪರಿಭಾಷೆಯಲ್ಲಿ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಎಂಬುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆ ಆಗಿದೆ. ಅದರಲ್ಲಿಯೇ ʼಅಭಿವೃದ್ಧಿಯ ಅಂತರʼ ಎಂದರೆ ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ, ರಾಜ್ಯ ಸರಾಸರಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳು ವ್ಯಾಖ್ಯಾನಿಸುತ್ತದೆ” ಎಂದರು.
“ಸಾರಾಂಶದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (ದಲಿತರು) ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ” ಅಸಮಾಧಾನ ವ್ಯಕ್ತಪಡಿಸಿದರು.
“ಕರ್ನಾಟಕ ಮಾನವ ಅಭಿವೃದ್ಧಿ ವರದಿ – 2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿಕೊಂಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಸರಾಸರಿ ಅಭಿವೃದ್ಧಿಗಿಂತಲೂ ದಲಿತರು ಕಡಿಮೆ ಅಭಿವೃದ್ಧಿ ಹೊಂದಿರುವುದು ಕಂಡುಬಂದಿದೆ. ಹೀಗಿರುವಾಗ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಕಾಯ್ದೆಯು ದಲಿತರಿಗೆ ಮೀಸಲಿಡುವ ಹಣವನ್ನು ಅಸಮಾನತೆಯ ಅಂತರವನ್ನು ಕಡಿಮೆ ಮಾಡುವ ಯೋಜನೆಗಳಲ್ಲಿ ವಿನಿಯೋಗಿಸಬೇಕೇ ಹೊರತು ಎಲ್ಲರ ಅಭಿವೃದ್ಧಿಗೆ ರೂಪಿಸುವ ಯೋಜನೆಗಳಲ್ಲಿ ಅಲ್ಲ” ಎಂದರು.
“2023-24ನೇ ಸಾಲಿನಿಂದಲೂ ಸುಮಾರು ರೂ. 25000 ಕೋಟಿಯನ್ನು ಗ್ಯಾರಂಟಿಗಳಿಗೂ, ರೂ. 15000 ಕೋಟಿಯನ್ನು ಅನ್ಯ ಉದ್ದೇಶಕ್ಕೂ ಬಳಸಿರುವುದು ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತೆ, ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರ ಕೂಡ ಮಾಡಿದಂತಾಗಿದೆ. ಅದಷ್ಟೇ ಅಲ್ಲದೆ ಸರ್ಕಾರ, ಮುಖ್ಯ ಮಂತ್ರಿಗಳು, ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಇತರ ಮಂತ್ರಿಗಳೂ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ ಮತ್ತು ಖಂಡನೀಯ” ಎಂದರು.
“ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂಬಂತೆ ದಲಿತರ ಓಗ್ಗಟ್ಟಿನ ಓಟುಗಳಿಂದ ಸರ್ಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ದಲಿತ ಸಮುದಾಯಗಳಿಗೆ ಬಗೆದ ಮಹಾ ದ್ರೋಹವಾಗಿದೆ” ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ವಿ ವಿ ಉಳಿಸಲು ರಾಜ್ಯದ ರೈತ ಸಂಘಟನೆಗಳು ಬೆಂಬಲಿಸಿ: ಉಡಚಪ್ಪ ಮಾಳಗಿ
“ಸರ್ಕಾರದ ಈ ದುರ್ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ. ಕನ್ನಡಿಗರೆಲ್ಲರಿಗೂ ಈ ಯೋಜನೆಯಿಂದ ಅನುಕೂಲವಾಗಿದೆ, ಸಂತೋಷ. ಆದರೆ ಗ್ಯಾರಂಟಿಗಳ ಉದ್ದೇಶವೇ ಬೇರೆ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಕಾಯ್ದೆಯ ಉದ್ದೇಶವೇ ಬೇರೆ. ಗ್ಯಾರಂಟಿಗಳು ದಲಿತರು ಮತ್ತು ದಲಿತೇತರರ ನಡುವಿನ ಸಾಮಾಜಿಕ-ಆರ್ಥಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದಿಲ್ಲ. ಆದ್ದರಿಂದ ಈಗಿಂದೀಗಲೇ ಗ್ಯಾರಂಟಿಗಳಿಗೆ ಬಳಸಿರುವ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಹಿಂದಿರುಗಿಸಬೇಕು” ಎಂದು ಶರೀಫ್ ಬಿಳಿಯಲಿ ಆಗ್ರಹಿಸಿದರು.