ಪಟ್ಟಣ ಪ್ರದೇಶಗಳಿಗೆ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು, ಕೆಲಸ-ಕಾರ್ಯಗಳಿಗಾಗಿ ಸಾಮಾನ್ಯ ಜನರು ದಿನನಿತ್ಯ ಬರುತ್ತಾರೆ. ಆದರೆ, ಅವರ ಪ್ರಯಾಣಕ್ಕೆ ಅನುಕೂಲರ ಸಾರಿಗೆ ವ್ಯವಸ್ಥೆಯಿಲ್ಲ. ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಎಸ್‌ಎಫ್‌ಐ ಪ್ರತಿಭಟನೆ ನಡೆಸಿದೆ.
ಗಜೇಂದ್ರಗಡದ ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು ಡಿಪೋ ಮ್ಯಾನೇಜರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆ ಮುಖಂಡ ಗಣೇಶ ರಾಠೋಡ್, “ಗಜೇಂದ್ರಗಡ ತಾಲೂಕು ಶೈಕ್ಷಣಿಕವಾಗಿ ದಿನೇ ದಿನೇ ಬೆಳೆಯುತ್ತಿರುವ ನಗರವಾಗಿದೆ. ಸುತ್ತಲಿನ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಆದರೆ, ಅವರಿಗೆ ಸರಿಯಾಗಿ ಬಸ್ ಸೌಕರ್ಯ ಇಲ್ಲದೇ ಶಿಕ್ಷಣ ವಂಚಿತರಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಬಸ್ ಸಮಸ್ಯೆ ಕುರಿತು ಹಲವಾರು ಭಾರಿ ನಾವು ಪ್ರತಿ ಶೈಕ್ಷಣಿಕ ವರ್ಷ ಆರಂಭವಾದ ಸಂದರ್ಭದಲ್ಲಿ ಹೋರಾಟ ಮಾಡಿಯೇ ಪರಿಹರಿಸುವ ಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಗಂಭೀರ ಎಂದು ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಮಾನ್ಯ ಡಿಪೋ ಮ್ಯಾನೇಜರ್ ಅವರು ಗಮನಹರಿಸಬೇಕು” ಎಂದರು.
ಚಂದ್ರು ರಾಠೋಡ್ ಮಾತನಾಡಿ, “ನಮಗೆ ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಮಾಟರಂಗಿ, ಬೆಣಚಮಟ್ಟಿ ಈ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ತೀವ್ರ ಇದ್ದು ನಾಗರಸಕೊಪ್ಪ ಕ್ರಾಸ್ ಗೆ ಎಲ್ಲಾ ಬಸ್ ಗಳನ್ನು ನಿಲ್ಲಿಸಬೇಕು ಮತ್ತು ಮಾಟರಂಗಿಯಿಂದ ಬೆಳ್ಳಿಗ್ಗೆ ಬರುವ ಬಸ್ ನ್ನು ಮತ್ತೆ ಮಧ್ಯಾಹ್ನ ಮರಳಿ ಬಿಡಬೇಕೆಂದು ಮತ್ತು ಮಾಟರಂಗಿ, ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಬೆಣಚಮಟ್ಟಿ ಮಾರ್ಗವಾಗಿ ಬೆಳ್ಳಿಗ್ಗೆ ಮತ್ತು ಮಧ್ಯಾಹ್ನ ಎರಡು ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದ ಪ್ರಭಾರಿ ಡಿಪೋ ಮ್ಯಾನೇಜರ್, “ಸಮಸ್ಯೆ ಬಗೆಹರಿಸಲು ಕಾಲಾವಕಾಶಬೇಕು. ಹೊಸ ಡಿಪೋ ಮ್ಯಾನೇಜರ್ ಬಂದ ಕೂಡಲೇ ಸಮಸ್ಯೆ ಬಗ್ಗೆ ಅವರಿಗೆ ತಿಳಿಸಿ, ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇವೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶರಣು ಎಂ, ಬಸವರಾಜ, ದ್ಯಾಮಾಣ್ಣ ಪೂಜಾರ್, ಪರಶುರಾಮ ಕೊನಸಾಗರ, ಬಸು ಪಾಟೀಲ್, ಸುಭಾಷ್ ಬಡಿಗೇರ, ವಿಜಯ ಮಡಿವಾಳ, ಬಸು ಹಗೇದಾಳ, ನೀಲಕಂಠ ಕರಡಿ, ಬಸವರಾಜ ನಾಗರಾಳ, ಮಾಹಾಂತೇಶ ಜೋಗಿ, ಅರುಣಕುಮಾರ ಕೊಟ್ಟುರು, ಅನಿಲ್ ಜಡದೇರ್,ಪ್ರತೀಕ ಪಲ್ಲೇದ ಮತ್ತು ಇತರರು ಇದ್ದರು.