ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯನ್ನು ರದ್ದುಪಡಿಸಲು ಆಗ್ರಹಿಸಿ, ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು ಎಂದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರು ಗಣೇಶ ರಾಠೋಡ ಮಾತನಾಡಿ, “ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ರಾಜಿನಾಮೆ ನೀಡಬೇಕು, ಎನ್.ಟಿ.ಎ ರದ್ದು ಪಡಿಸಬೇಕು. ನೀಟ್ ಕೇಂದ್ರಿಕರಣ ನಿಲ್ಲಬೇಕು. ಶಿಕ್ಷಣ ಸರ್ಕಾರ ನೀಡುವ ಸೇವೆಯಾಗಬೇಕೇ ಹೊರತು ಸರಕಲ್ಲ. ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇರಬೇಕು. ಆದರೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಶಿಕ್ಷಣವನ್ನು ಕೇಂದ್ರೀಕರಿಸಿ ವ್ಯಾಪಾರದ ಸರಕಾಗಿಸುತ್ತಿದೆ” ಎಂದು ಕಿಡಿಕಾರಿದರು.
“ಕೋಚಿಂಗ್ ಮಾಫಿಯಾಗಳು ಹೆಚ್ಚಾಗಿದ್ದು, ಈ ರೀತಿಯ ಸ್ಕ್ಯಾನ್ ಗಳು ದಿನನಿತ್ಯ ನಡೆಯುತ್ತಿವೆ. ಇದರಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವೆಲ್ಲ ಕಾರಣಗಳ ಹೊಣೆ ಹೊತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ರಕ್ಷಣಾ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷರು ಚಂದ್ರು ರಾಠೋಡ ಮಾತನಾಡಿ, “ಅಧಿಕಾರದ ಅಹಂಕಾರಕ್ಕಿಂತ ಪ್ರಜಾಪ್ರಭುತ್ವದ ಧ್ವನಿಗೆ ಬೆಲೆ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ನೀಟ್ ಪರೀಕ್ಷೆ ಅಕ್ರಮ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಒತ್ತಾಯಿಸಿ ಪರಿಸರವಾದಿ ಶಿಕ್ಷಣತಜ್ಞ ಹೋರಾಟಗಾರದ ಸೋನಮ್ ವಾಚುಂಕ್ ಅವರು ಕೈಗೊಂಡರು ಉಪವಾಸ ಸತ್ಯಾಗ್ರಹವು ದೇಶದ ಯುವಜನರ ಆತಂಕ ಮತ್ತು ಆಕ್ರೋಶದ ಪ್ರತೀಕವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದಂತ ಗಂಭೀರ ಪ್ರಶ್ನೆಗಳ ಎದುರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸುತಿರುವ ಮೌನ ಮತ್ತು ನಿರ್ಲಕ್ಷ ಅತ್ಯಂತ ಖಂಡನಿಯ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಅನಿಲ್ ಆರ್, ಮುಖಂಡರು ಗುರು ಶಾಂತಗೌಡರ, ಮೀನಾಕ್ಷಿ, ನೇತ್ರಾವತಿ, ನಿವೇದಿತಾ, ಜಮುನಾ, ಮಧು, ಶ್ರೇಯ, ಸುಮಂಗಲ, ಸುಶ್ಮಿತಾ, ಕಿಶೋರ್, ಆಕಾಶ್ ,ಅಜಯ್, ಪ್ರಭು, ಹರೀಶ್, ಅನಿಲ್ ಕುಮಾರ್ ಅನಿಲ್ ದೊಡ್ಡಬಸಪ್ಪ , ರಮೇಶ್ ಮಂಜುನಾಥ್ ಗುರುರಾಜ್, ಬಸವರಾಜ್, ನಾಗರಾಜ್ ವಿಶಾಲ್, ಪವಿತ್ರ , ರೇಣುಕಾ ಪುಷ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





