ಅಮೆರಿಕದಲ್ಲಿ ಜೆನೆರಿಕ್ ಔಷಧಗಳ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶೀಯವಾಗಿ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಜೊತೆಗೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಗಳ ಮೇಲೆ ಹಂತ-ಹಂತವಾಗಿ 200%ರಷ್ಟು ಭಾರಿ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ಹೊಸ ನೀತಿಯು ಪ್ರಪಂಚದಲ್ಲೇ ಅತಿ ಹೆಚ್ಚು ಜೆನೆರಿಕ್ ಔಷಧಗಳನ್ನು ರಫ್ತು ಮಾಡುವ ಭಾರತದಂತಹ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ತಮ್ಮ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ಸುಂಕಗಳನ್ನು ಹೆಚ್ಚಿಸುವ ಯೋಜನೆಯು 2026ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಮೊದಲ ಎರಡು ವರ್ಷಗಳ ಕಾಲ ಆಮದಾಗುವ ಎಲ್ಲ ಜೆನೆರಿಕ್ ಔಷಧಗಳ ಮೇಲಿನ ಸುಂಕವು 0% (ಯಾವುದೇ ಸುಂಕವಿರುವುದಿಲ್ಲ). ಆದರೆ, ಮೂರನೇ ವರ್ಷಕ್ಕೆ ಈ ಸುಂಕವನ್ನು 100%ಕ್ಕೆ ಏರಿಸಲಾಗುತ್ತದೆ. ಅದಾದ ನಂತರದ ವರ್ಷಗಳಲ್ಲಿ 200%ರಷ್ಟು ಸುಂಕ ವಿಧಿಸಲಾಗುತ್ತದೆ. ಅಮೆರಿಕ ನೀಡಿದ ಈ ಕಾಲಮಿತಿಯೊಳಗೆ ದೇಶದ ಒಳಗೆ ಉತ್ಪಾದನಾ ಘಟಕಗಳು ಮತ್ತು ಉಪಕರಣಗಳನ್ನು ನಿರ್ಮಿಸದ ಔಷಧ ಕಂಪನಿಗಳಿಗೆ ದಂಡ ವಿಧಿಸುವ ಮತ್ತು ಅಮೆರಿಕದಲ್ಲೇ ಔಷಧ ಉತ್ಪಾದನೆಯನ್ನು ಮರುಸೃಷ್ಟಿಸುವ ಮುಖ್ಯ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಟ್ರಂಪ್ ಅವರ ಈ ಘೋಷಯು ಪ್ರಪಂಚದಾದ್ಯಂತ ಅಪಾರ ಪ್ರಮಾಣದ ಜೆನೆರಿಕ್ ಔಷಧಗಳನ್ನು ಪೂರೈಸುವ ರಾಷ್ಟ್ರಗಳಲ್ಲಿ ಪ್ರಮುಖ ದೇಶವಾದ ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಪ್ರಸ್ತುತ ಅಮೆರಿಕ ಬಳಸುತ್ತಿರುವ 40%ರಷ್ಟು ಜೆನೆರಿಕ್ ಔಷಧಗಳನ್ನು ಭಾರತವೇ ಪೂರೈಸುತ್ತಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವರದಿಯ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಭಾರತವು ಅಮೆರಿಕಕ್ಕೆ 9.7 ಬಿಲಿಯನ್ ಡಾಲರ್ ಮೌಲ್ಯದ ಔಷಧಗಳನ್ನು ರಫ್ತು ಮಾಡಿದೆ. ಇದು ಭಾರತದ ಒಟ್ಟು 25.8 ಬಿಲಿಯನ್ ಡಾಲರ್ ಔಷಧ ರಫ್ತಿನಲ್ಲಿ 38% ರಷ್ಟಾಗಿದೆ.
ಅಮೆರಿಕದಲ್ಲಿ ಅಧಿಕ ರಕ್ತದೊತ್ತಡ, ಖಿನ್ನತೆ, ಮಧುಮೇಹ, ಕ್ಯಾನ್ಸರ್ ಹಾಗೂ ಸಾಂಕ್ರಾಮಿಕ ರೋಗಗಳಿಗೆ ನೀಡಲಾಗುವ ಜೆನೆರಿಕ್ ಔಷಧಗಳಿಗೆ ಭಾರತವೇ ಆಧಾರವಾಗಿದೆ. ಈ ಹೊಸ ಸುಂಕ ನೀತಿಯು ಭಾರತದಿಂದ ಅಗ್ಗದ ದರದಲ್ಲಿ ಪೂರೈಕೆಯಾಗುವ ಔಷಧಗಳ ಮೇಲೆ ಪರಿಣಾಮ ಬೀರಲಿದ್ದು, ಭಾರತೀಯ ಔಷಧ ಕಂಪನಿಗಳಲ್ಲಿ ಆತಂಕ ಮೂಡಿಸಿದೆ.




