ದಮನಿತರ ಧ್ವನಿಯಾಗಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಕಾರ್ಯ ಮಾಡುತ್ತಿದ್ದು, ಕಳೆದ 54 ವರ್ಷಗಳಿಂದ ವಿದ್ಯಾರ್ಥಿ ಹಕ್ಕುಗಳ ರಕ್ಷಣೆಗೆ, ಶಿಕ್ಷಣದ ಉಳಿವಿಗಾಗಿ ನಿರಂತರ ಸೈದ್ದಾಂತಿಕ ಮತ್ತು ಶೈಕ್ಷಣಿಕ ಚಳವಳಿಯನ್ನು ಮುಂದುವರಿಸಿದೆ ಎಂದು ರಾಜ್ಯಪದಾಧಿಕಾರಿ ಗಣೇಶ್ ರಾಠೋಡ್ ತಿಳಿಸಿದರು.
ಗದಗ ಜಿಲ್ಲೆ ಗಜೇಂದ್ರಗಡ ನಗರದ ಎಸ್‌ಎಫ್‌ಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 54ನೇ ಎಸ್‌ಎಫ್‌ಐ ಸಂಸ್ಥಾಪನಾ ದಿನಾಚರಣೆ ವೇಳೆ ಎಸ್‌ಎಫ್‌ಐ ಧ್ವಜಾರೋಹಣ ಮಾಡಿ ಮಾತನಾಡಿದರು.
“ಕುವೆಂಪು ಅವರು, ʼಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳುʼ ಎಂದು ಹೇಳಿದಂತೆ ಸಮಾನತೆಯ ಶಿಕ್ಷಣಕ್ಕಾಗಿ ಮತ್ತು ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಾಜವಾದಕ್ಕಾಗಿ ನಿರಂತರ ಹೋರಾಟ ಮಾಡುತ್ತಿದೆ. ಶೋಷಿತರ, ದಮನಿತರ ಧ್ವನಿಯಾಗಿ ಎಸ್‌ಎಫ್‌ಐ ಕಾರ್ಯ ಮಾಡುತ್ತಿದೆ” ಎಂದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಬಾಲು ರಾಠೋಡ್ ಮಾತನಾಡಿ, “ನೀವೆಲ್ಲಾ ರೈತ ಕಾರ್ಮಿಕ ಕೃಷಿ ಕೂಲಿಕಾರರ ಮಕ್ಕಳು. ನಿಮ್ಮ ಹಕ್ಕುಗಳಿಗಾಗಿ ನಡೆಯುವ ಚಳವಳಿಯ ಜೊತೆ ನಿಲ್ಲಬೇಕು. ಸದಾ ಕಾರ್ಮಿಕರ, ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ಶಾಂತಿಯ ತೋಟವನ್ನು ಎಲ್ಲರೂ ಸೇರಿ ರಕ್ಷಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತಾಲೂಕು ಮಟ್ಟದ 10ನೇ ಮಕ್ಕಳ ಸಾಹಿತ್ಯ ಸಮ್ಮೇಳನ
“ಉದ್ಯೋಗದ ಅಭದ್ರತೆ ಹೆಚ್ಚುತಿದ್ದು, ಸರ್ಕಾರದ ನೀತಿಗಳು ಕಾರ್ಪೊರೇಟ್ ಪರವಾಗಿವೆ. ಅದಕ್ಕೆ ಕಾರ್ಮಿಕ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ತಡೆಯಲು ಎಸ್‌ಎಫ್‌ಐ ಸಂಘಟನೆ ಪಾತ್ರ ಮಹತ್ವದ್ದು. ಹಾಗಾಗಿ ನೀವು ಈ ಸಂಸ್ಥಪನಾ ದಿನದಂದು ಸಂಕಲ್ಪ ಮಾಡಿ ವಿದ್ಯಾರ್ಥಿ ಸಂಘಟನೆಯನ್ನು ಬಲಗೊಳಿಸಬೇಕು” ಎಂದರು.
ಎಸ್‌ಎಫ್‌ಐನ ಜಿಲ್ಲಾ ಮುಖಂಡ ಚಂದ್ರು ರಾಠೋಡ್, ತಾಲೂಕು ಕಾರ್ಯದರ್ಶಿ ಶರಣು ಎಂ, ಸಂಗೀತಾ, ನಂದಿನಿ, ಅಶ್ವಿನಿ, ಶಿವರಾಜ್, ಚಂದ್ರು, ಅಡಿಯಪ್ಪ ಮತ್ತು ವಿದ್ಯಾರ್ಥಿಗಳು ಇದ್ದರು.