ದೇಶದ ನಾಡಿಮಿಡಿತ ಅರಿತ ಸಂಸದೀಯ ಪಟು, ಆರ್ಥಿಕ ಸಲಹೆಗಾರ ಸೀತಾರಾಮ್ ಯೆಚೂರಿ ಅವರು 1975ರಲ್ಲಿ ಜೆಎಸನ್‌ಯು ವಿವಿಯಲ್ಲಿ ಅಧ್ಯಯನ ಮಾಡುವ ಸಮಯದಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ವಿರುದ್ಧ ಹೋರಾಟ ಮಾಡಿ ಜೈಲಿಗೆ ಸೇರಿದ್ದರು ಮತ್ತು ಉಪಕುಲಪತಿಯ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ಎಸ್‌ಎಫ್‌ಐ ಗದಗ ಜಿಲ್ಲಾ ಮುಖಂಡ ಚಂದ್ರು ರಾಠೋಡ ಸ್ಮರಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಕಚೇರಿಯಲ್ಲಿ ತಾಲೂಕು ಸಮಿತಿಯಿಂದ ನೇತಾರ ಸೀತಾರಾಮ್ ಯೆಚೂರಿ ಅವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
“ಎಸ್‌ಎಫ್‌ಐ ಅಖಿಲ ಭಾರತ ಮಾಜಿ ಅಧ್ಯಕ್ಷ ಕಾಮ್ರೇಡ್ ಸೀತಾರಾಮ್ ಯೆಚೂರಿಯವರು ನಮನ್ನಗಲಿದ್ದಾರೆ. ವಿದ್ಯಾರ್ಥಿ ಯುವಜನರು, ರೈತರು, ಕಾರ್ಮಿಕರಪರ ಯಶಸ್ವಿ ಸಂಘರ್ಷಾತ್ಮಕ ಹೋರಾಟಗಳನ್ನು ಕಟ್ಟಿ ಪಾರ್ಲಿಮೆಂಟ್ ಸದಸ್ಯರಾಗಿ ಎರಡುಬಾರಿ ಅತ್ಯುತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು” ಎಂದು ಹೇಳಿದರು.
“ಯೆಚೂರಿಯವರು ಸಂಸದೀಯ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಆರ್ಥಿಕ ಸಲಹೆ ನೀಡಿದ್ದಾರೆ. ತಮ್ಮ ಜೀವನದ ಕೊನೆವರೆಗೂ ದುಡಿಯುವ ಜನರ ಪರವಾಗಿ, ಕೋಮುವಾದಿ ಫ್ಯಾಸಿಸ್ಟನ್ನು ಹಿಮ್ಮೆಟ್ಟಿಸಲು ಶ್ರಮಿಸಿದ ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರ ಅಗಲಿಕೆ ದೇಶದ ದುಡಿಯುವ ಜನರ ಚಳವಳಿಗೆ ತುಂಬಲಾರದ ನಷ್ಟವಾಗಿದೆ” ಎಂದು ಕಣ್ಣೀರು ಮಿಡಿದರು.
“ದೇಶದ ಜನರ ನಾಡಿಮಿಡಿತ, ಆರ್ಥಿಕತೆ, ಸಾಮಾಜಿಕತೆ, ರಾಜಕೀಯ, ಸಾಂಸ್ಕೃತಿಕತೆ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಸ್ಪಷ್ಟತೆಯ ನಿಲವು ಹೊಂದಿದ್ದರು, ಸಲಹೆ ನೀಡುತ್ತಿದ್ದರು. ಈಗ ಅವರ ಅಗಲಿಕೆ ದೇಶದ ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ತುಂಬಲಾರದ ನಷ್ಟ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವುದು ಅವೈಜ್ಞಾನಿಕ: ರೈತ ಸಂಘ
ಈ ಸಂದರ್ಭದಲ್ಲಿ ಎಸ್‌ಎಫ್‌ಐನ ಪದಾಧಿಕಾರಿಗಳಾದ ಅನಿಲ್ ರಾಠೋಡ, ಸುದೀಪ್ ಹುಬ್ಬಳ್ಳಿ, ಸಿಪಿಎಂ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಮೆಹಬೂಬ್ ಹವಾಲ್ದಾರ್, ಕಾರ್ಮಿಕ ಮುಖಂಡರಾದ ಕನಕರಾಯ ಹಾದಿಮನಿ, ಪ್ರಾಕಾಶ ಹೊಸಮನಿ, ಶರಣಪ್ಪ ಗೋಸಾವಿ, ಫೀರೋಜಿ ರಾಮ್‌ಜೀ, ಕಳಕಪ್ಪ ಅವಧೂತ ಇದ್ದರು.