ಗದಗದ ಬೆಟಗೇರಿಯ ಹೊಸ ಬನಶಂಕರಿ ಗುಡಿ ಹತ್ತಿರ ಬುಧವಾರ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಬೀದಿದನ ದಾಳಿ ಮಾಡಿದ್ದು, ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶಂಕ್ರಪ್ಪ ಹೋಳಿ(70) ಮೃತವ್ಯಕ್ತಿ.
“ವೃದ್ಧ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ದಾಳಿಗೈದ ಬೀದಿದನದಿಂದ ಕೆಳಗೆ ಬಿದ್ದರು. ಇದನ್ನು ಕಂಡ ಸ್ಥಳೀಯರು ಕೂಡಲೇ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಒಂದೂವರೆ ಘಂಟೆಯಾದರೂ ಆಂಬುಲೆನ್ಸ್ ಸ್ಥಳಕ್ಕೆ ಬಾರದೆ ಇರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಶಂಕ್ರಪ್ಪ ಹೋಳಿ(70) ಮೃತಪಟ್ಟರು” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದಾಗಿ ರೊಚ್ಚಿಗೆದ್ದ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದ್ದರಲ್ಲದೆ, ನಗರಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಬೀದಿ ದನಗಳನ್ನು ಸ್ಥಳಾಂತರಿಸಬೇಕು. ಬೀದಿ ದನದ ದಾಳಿಗೆ ಬಲಿಯಾದ ವೃದ್ಧನ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪ್ರವಾಹದಲ್ಲಿ ಕೊಚ್ಚಿ ಹೋದ ರೈತರ ಬದುಕು; ಬೇಕಿದೆ ಬೆಳೆ ಪರಿಹಾರ
ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, “ನಾಳೆಯಿಂದ ಮೈಕ್ ಅನೌನ್ಸ್ ಮಾಡಿ ದನಗಳ ಮಾಲೀಕರಿಗೆ, ದೇವಸ್ಥಾನದ ದನಗಳು, ಬಿಡಾಡಿ ದನಗಳು ಈ ಮೂರು ತರಹದ ದನಗಳ ಮಾಲೀಕರಿಗೆ ನೋಟಿಸ್ ನೀಡುತ್ತೇವೆ. ಇದಕ್ಕೆ ಕಡಿವಾಣ ಹಾಕುತ್ತೇವೆ” ಎಂದು ಹೇಳಿದರು. ಬಳಿಕ ಪ್ರತಿಭಟನಾಕಾರರು ಧರಣಿಯನ್ನು ಹಿಂಪಡೆದಿದ್ದಾರೆ.