ವಿದ್ಯಾಭ್ಯಾಸದ ಜತೆ ಸಾಧನೆಗೆ ಉದ್ಯೋಗಾಧಾರಿತ ಕೌಶಲ್ಯಗಳನ್ನೂ ರೂಢಿಸಿಕೊಂಡು ಯಶಸ್ವಿ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ಗದಗ ಜಿಲ್ಲೆಯ ಮುಳಗುಂದ ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜ ದೇಶಪಾಂಡೆ ಹೇಳಿದರು.
ಪಟ್ಟಣದ ಎನ್ ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಶೈಕ್ಷಣಿಕ ಸಾಲಿನ ವಿವಿಧ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು.
“ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ವಿವಿಧ ಕೌಶಲ್ಯಗಳನ್ನು ಕರಗತಗೊಳಿಸಿಕೊಂಡರೆ ಜೀವನದ ಹಾದಿ ಸುಗಮವಾಗುತ್ತದೆ” ಎಂದು ಸಲಹೆ ನೀಡಿದರು.
ಲಕ್ಷ್ಮೀಶ್ವರ ಸರ್ಕಾರಿ ಪದವಿ ಪೂರ್ವ ಮಾಹಾವಿದ್ಯಾಲಯದ ಉಪನ್ಯಾಸಕ ಬಸವಣ್ಣೆಪ್ಪ ಮುರಳಿಹಳ್ಳಿ ಮಾತನಾಡಿ, “ಸಾಧನೆಗೆ ಅಂಗವೈಕಲ್ಯ, ಬಡತನ ಅಡ್ಡಿ ಬರುವುದಿಲ್ಲ. ಸಾಧಿಸುವ ಛಲ, ಗುರಿ, ಯಶಸ್ಸಿನ ಮನೋಭಾವ, ಯೋಚನಾ ಶಕ್ತಿ, ಗಟ್ಟಿ ನಿರ್ಧಾರ ವಿದ್ಯಾರ್ಥಿ ಹಂತದಲ್ಲೇ ರೂಢಿಸಿಕೊಂಡರೆ ಸಾಧನೆ ಸಾಧ್ಯ” ಎಂದರು.
ಪ್ರಾಂಶುಪಾಲ ಡಾ. ಆರ್ ಎಂ ಕಲ್ಲನಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಕ್ಕಳಲ್ಲಿ ಅಫಾರ ಜ್ಞಾನ ಅಡಗಿದೆ. ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲು ಪದವಿ ಹಂತದಲ್ಲಿ ಸಾಧ್ಯವಾಗುತ್ತದೆ. ಇದರಿಂದ ಉತ್ತಮ ಪ್ರಜೆಗಳಾಗಿ ಹೋರಹೊಮ್ಮಲು ಸಾಧ್ಯವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಎಸ್ ಸಿ ಬಡ್ಡಿ, ಪ್ರಸನ್ನ ಎಸ್, ಅನುಪಮ, ಜಾನಕಿ ಮರಾಠ, ತಾರಾದೇವಿ, ವಿನಾಯಕ ಶಿರಬಡಿಗಿ, ಗೀತಾಂಜಲಿ ಸೇರಿದಂತೆ ಬೋಧಕೇತರ ಮತ್ತು ಅತಿಥಿ ಉಪನ್ಯಾಸಕರು ಇದ್ದರು.
