ಮುಂಗಾರು ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಬರದ ಆತಂಕ ಎದುರಾಗಿದೆ. ಈ ನಡುವೆ, ಕಳಪೆ ಬಿತ್ತನೆ ಬೀಜದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಸೂರ್ಯಕಾಂತಿ ಬೆಳೆಯುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ರೈತರು ಬಿತ್ತನೆ ಬೀಜ ಮಾರಾಟ ಕಂಪನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ತಾಲೂಕಿನ ಹೆಚ್ಚಿನ ರೈತರು ಸೂರ್ಯಕಾಂತಿ ಬೆಳೆ ಬೆಳೆಯುತ್ತಾರೆ. ಅಂತೆಯೇ, ಈ ವರ್ಷವೂ ಕೆಲವು ಬಿತ್ತನೆ ಬೀಜ ಮಾರಾಟ ಕಂಪನಿಗಳಿಂದ ಸೂರ್ಯಕಾಂತಿ ಬಿತ್ತನೆ ಬೀಜ ಖರೀದಿಸಿ, ಬಿತ್ತನೆ ಮಾಡಿದ್ದರು. ಆದರೆ, ಕಳಪೆ ಬೀಜಗಳಿಂದಾಗಿ, ಉತ್ತಮ ಬೆಳೆ ಬಾರದೆ, ನಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಖಾಸಗಿ ಬಿತ್ತನೆ ಬೀಜ ಮಾರಾಟ ಕಂಪನಿಯಿಂದ ತಾಲೂಕಿನ ಬರದೂರು, ಮೇವುಂಡಿ, ಹೈತಾಪುರ, ಡಂಬಳ, ಹಳ್ಳಿಕೇರಿ, ಹಳ್ಳಿಗುಡಿ, ಕದಾಂಪುರ, ಶಿರೋಳ, ಮುರುಡಿ, ಮಕ್ತುಂಪುರ ಮೊದಲಾದ ಗ್ರಾಮಗಳ ರೈತರು ಸೂರ್ಯಕಾಂತಿ ಬಿತ್ತನೆ ಬೀಜಗಳನ್ನು ಖರೀದಿಸಿದ್ದರು. ಸೂರ್ಯಕಾಂತಿ ಗಿಡಗಳು ಚೆನ್ನಾಗಿಯೇ ಬೆಳೆದಿದ್ದರೂ, ಹೂವು ಕಾಯಿಗಟ್ಟು ಸಮಯದಲ್ಲಿ ಕಾಳುಗಳ ಬದಲಾಗಿ, ಹುಲ್ಲಿನ ಎಲೆಗಳು ಮೂಡಿವೆ. ಸೂರ್ಯಕಾಂತಿ ತೆನೆಗಟ್ಟದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.
ಒಂದು ಕೆ.ಜಿ ಸೂರ್ಯಕಾಂತಿ ಬೀಜಕ್ಕೆ 2,000ರಿಂದ 2,500 ರೂ. ಭರಿಸಿ, ಬೀಜ ಖರಿಸಿದ್ದ ರೈತರು, ಎಕರೆಗಟ್ಟಲೆ ಭೂಮಿಯನ್ನು ಉತ್ತು, ಬಿತ್ತನೆ ಮಾಡಿದ್ದರು. ಒಂದು ಎಕರೆ ಬಿತ್ತನೆ ಮಾಡಲು ರೈತ ಸುಮಾರು 20,000 ರೂ. ಖರ್ಚು ಮಾಡಿದ್ದ ರೈತರಿಗೆ, ಹಾಕಿದ್ದ ಬಂಡವಾಳವೂ ಕೈಸೇರದಂತಾಗಿದೆ. ನಷ್ಟದ ಸುಳಿಗೆ ಸಿಲುಕಿಕೊಂಡಿದ್ದಾರೆ.
ಈ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಒಟ್ಟು 7,000 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ, ಸುಮಾರು 5,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ, 2,000 ಹೆಕ್ಟೇರ್ ಪ್ರದೇಶದಲ್ಲಿ ಕಳಪೆ ಬೀಜಗಳ ಬಿತ್ತನೆಯಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್, “ರೈತರಿಗೆ ಮೋಸ ಮಾಡಿರುವ ಕಂಪನಿವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ. ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.