ಗದಗ-ಬೆಟಗೇರಿ ಅವಳಿ ನಗರದಲ್ಲಿ ಎರಡು ಮೂರು ದಿನಗಳ ಹಿಂದೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಬೆಟಗೇರಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸೂಪರ್ ಹೈಟೆಕ್ ತರಕಾರಿ ಮಾರುಕಟ್ಟೆಯ ಕಾಂಪೌಂಡ್ ಬಿರುಕು ಬಿಟ್ಟಿದೆ. ಪಿಲ್ಲರಗಳು ಬಿರುಕು ಬಿಟ್ಟು ವಾಲಿವೆ. ಅಲ್ಲಿರುವ ನೂರಾರು ಮಂದಿ ತರಕಾರಿ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿ, ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಗರಸಭೆ ವತಿಯಿಂದ ಅಂದಾಜು 2 ಕೋಟಿ ರೂ ವೆಚ್ಚದಲ್ಲಿ ಸೂಪರ್ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಿದ್ದು, 120 ವ್ಯಾಪಾರ ಮಳಿಗೆಗಳಿವೆ. ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಿತ್ತು. ಇದೀಗ ಮಾರುಕಟ್ಟೆ ಪಿಲ್ಲರುಗಳು ಬಿರುಕು ಬಿಟ್ಟಿರುವುದರಿಂದ ವ್ಯಾಪಾರಸ್ಥರಲ್ಲಿ, ಮಾರುಕಟ್ಟೆಗೆ ಬರುವ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಪಿಲ್ಲರ್ ಗಳಿಗೆ ಅಳವಡಿಸಲಾದ ತಗಡುಗಳನ್ನು ಸದ್ಯ ತೆರವುಗೊಳಿಸಲಾಗಿದ್ದು, ಮಾರುಕಟ್ಟೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪಿಲ್ಲರ್‌ಗಳು ಯಾವಾಗ ಕುಸಿದುಬಿಡುತ್ತವೆ ಎಂಬ ಭಯ ವ್ಯಾಪಾರಸ್ಥರನ್ನು ಕಾಡಲಾರಂಭಿಸಿದೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾರುಕಟ್ಟೆ ಉದ್ಘಾಟನೆಯಾಗಿ ಏಳೇ ತಿಂಗಳಿಗೆ ಪಿಲ್ಲರುಗಳು ವಾಲಿವೆ. ತಾತ್ಕಾಲಿಕವಾಗಿ ಪ್ರತಿ ಪಿಲ್ಲರಿಗೂ ತಂತಿಯನ್ನು ಬಿಗಿಯಲಾಗಿದೆ. ಇಷ್ಟು ದೊಡ್ಡ ಮಾರುಕಟ್ಟೆಯ ಕಟ್ಟಡವನ್ನು ಹೊರುವಷ್ಟು ಪಿಲ್ಲರ್‌ಗಳಲ್ಲಿ ಸಾಮರ್ಥ್ಯ ಇಲ್ಲ. ಸಾಮಾನ್ಯ ಮನೆಗಳಿಗೆ ಇರುವ ಪಿಲ್ಲರ್ ಪ್ರಮಾಣದಲ್ಲಿ ನಿರ್ಮಿಸಲಾಗಿದೆ. ಹೀಗಿದ್ದಾಗ ಭಾರ ಹೊರಲು ಹೇಗೆ ಸಾಧ್ಯ. ಇಡೀ ಮಾರುಕಟ್ಟೆಯ ಕಟ್ಟಡವೇ ಕಳಪೆ ಕಾಮಗಾರಿಯಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.
ಬಿರುಗಾಳಿ ಸಹಿತ ಮಳೆಗೆ ಬಿರುಕು ಬಿಟ್ಟ ಪಿಲ್ಲರುಗಳು ವಾಲುತ್ತಿರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಸ್ಥರು ಮಾರುಕಟ್ಟೆಯ ಮುಂದಿನ ಬಯಲು ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದು, ಮಳೆಯಾದರೆ ವ್ಯಾಪಾರ ಮಾಡಲು ತೊಂದರೆ ಆಗುತ್ತದೆ. ಈ ರೀತಿ ಮಾರುಕಟ್ಟೆ ಕಳೆಪೆ ಕಾಮಗಾರಿ ಮಾಡಿದ್ದರಿಂದ ಬೀದಿಗೆ ಬಂದಿದ್ದೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಈ ಕುರಿತು ಈದಿನ.ಕಾಮ್ ಜೊತೆಗೆ ತರಕಾರಿ ವ್ಯಾಪಾರಸ್ಥೆ ಮಮತಾ ಮಾತನಾಡಿ, “ಹೆಸರಿಗಷ್ಟೇ ಹೈಟೆಕ್ ಮಾರುಕಟ್ಟೆ ಆಗೈತಿ. ಮಾರುಕಟ್ಟೆ ಸರಿಯಾಗಿ ಕಟ್ಟದೆ ಇದ್ದಿದ್ದರಿಂದ ಹಿಂಗೆಲ್ಲ ಬಿರುಕು ಬಿಟ್ಟೈತಿ, ಈಗ ನಾವು ಬಿಸಲಾಗ, ಮಳ್ಯಾಗ ಯಾಪಾರ ಮಾಡಾಕಂತೀವಿ. ಮಳಿಯಾದ್ರ ಯಾಪಾರ ಎಲ್ಲ ಬಂದ ಆಗತೈತಿ. ರಿಪೇರಿ ಮಾಡಿದಾಗ ಬರೀರಂತ ಹೇಳ್ತರ. ಬೇಗ ರೆಡಿ ಮಾಡಿದ್ರ ಯಾಪಾರ ಮಾಡಾಕ ಅನುಕೂಲ ಆಗುತ್ತ” ಎಂದು ಹೇಳಿದರು.
ಇದನ್ನೂ ಓದಿ: ಗದಗ | ಮನರೇಗಾ ಯೋಜನೆಯಡಿ ಸ್ವಾವಲಂಬಿ ಬದುಕು; ಮುಂಡವಾಡದ ವೃದ್ಧ ದಂಪತಿಯ ಶ್ರಮಗಾಥೆ
ಗದಗ-ಬೆಟಗೇರಿಯ ಸೂಪರ್ ಹೈಟೆಕ್ ತರಕಾರಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಬಿರುಕುಗಳು ಕೇವಲ ಕಟ್ಟಡದ ತಾಂತ್ರಿಕ ದೌರ್ಬಲ್ಯವಲ್ಲ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಸ್ಥಿರ ಕಾಮಗಾರಿಗಳ ಕಳಪೆ ಗುಣಮಟ್ಟದ ಸಂಕೇತವೂ ಆಗಿದೆ. ನೂರಾರು ವ್ಯಾಪಾರಿಗಳ ದಿನನಿತ್ಯದ ಬದುಕಿಗೆ ಆಧಾರವಾದ ಈ ಮಾರುಕಟ್ಟೆಯ ಭದ್ರತೆ ಸವಾಲು ಎದುರಿಸುತ್ತಿರುವುದು ಆತಂಕಕಾರಿ. ಸಾರ್ವಜನಿಕ ಹಣದ ಸರಿಯಾದ ಬಳಕೆ, ಕಟ್ಟಡದ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣದ ಕ್ರಮ ಅಗತ್ಯವಾಗಿದೆ. ಬಿರುಗಾಳಿ-ಮಳೆಯೆಂದು ಕಾರಣ ಹೇಳದೆ, ಇದನ್ನು ಒಂದು ಎಚ್ಚರಿಕೆ ಎಂದು ಪರಿಗಣಿಸಿ, ಭವಿಷ್ಯದಲ್ಲಿ ಇಂತಹ ಅಪಾಯಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.