ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು ಒಳಮೀಸಲಾತಿಯನ್ನು ಜಾರಿಮಾಡುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕ ಸರ್ಕಾರ ಆಮೆಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾ. ನಾಗಮೋಹನದಾಸ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ ಎಂದು ಡಿಎಸ್‌ಎಸ್ ನರಗುಂದ ತಾಲೂಕು ಸಂಚಾಲಕ ದತ್ತು ಜೋಗನ್ನವರ ಅಸಮಾಧಾನ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಒಳಮೀಸಲಾತಿ ಕೂಡಲೇ ಜಾರಿಗೆ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ನರಗುಂದ ಶಾಸಕರ ಮನೆ ಮುಂದೆ ತಮಟೆ ಚಳವಳಿ ನಡೆಸಿ ಶಾಸಕ ಸಿ ಸಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಎರಡು ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ನೀಡದೆ ಕಾಲಹರಣ ನಡೆಸುತ್ತಿದೆ. ಆಯೋಗ ರಚಿಸಬೇಕೆನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರ್ಕಾರದ ಮುಂದೆ ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿಯಿದೆ. ಮಾಧುಸ್ವಾಮಿಯವರ ಸಮಿತಿ ಯಾಕೆ(ಆದಿಕರ್ನಾಟಕ) (ಆದಿದ್ರಾವಿಡ) ಸಮಸ್ಯೆಗೆ ಪರಿಹಾರ ಒದಗಿಸಿದೆ” ಎಂದರು.
“2011ರ ಜನಗಣತಿಯ ಅಂಕಿ ಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನ್ಯಾ. ನಾಗಮೋಹನದಾಸ ಆಯೋಗಕ್ಕೆ ಅದೇ ಕೆಲಸವನ್ನು ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಳಮೀಸಲಾತಿ ಜಾರಿಯಾಗುವವರಿಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲವೆಂದು ಭರವಸೆ ಕೊಟ್ಟಿತ್ತು. ಆದರೆ ಈ ಭರವಸೆ ಜಾರಿಯಾಗಿಲ್ಲ. ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಗಳಿಂದ ಬರುತ್ತಲೇ ಇವೆ. ಹಾಗಾಗಿ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ ಕೊಡಲಾಗಿದೆ” ಎಂದರು.
ಈ ಸುದೆದಿ ಓದಿದ್ದೀರಾ? ಗಜೇಂದ್ರಗಡ | ಬೀದಿಬದಿ ವ್ಯಾಪಾರಸ್ಥರ ತಾಲೂಕು ಸಮಾವೇಶ
“ಹರಿಯಾಣದ ಬಿಜೆಪಿ ಸರ್ಕಾರ ಸುಪ್ರ ಕೋರ್ಟಿನ ತೀರ್ಪು ಬಂದ ಮೊದಲ ವಾರದಲ್ಲೇ ಒಳಮೀಸಲಾತಿ ಜಾರಿಮಾಡಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಹೇಳಿ ಅಧಿಕಾರ ಹಿಡಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಗೆ ವಿಶ್ವಾಸ ದ್ರೋಹ ಎಸಗಿದ್ದಾರೆ” ಎಂದು ದತ್ತು ಜೋಗಣ್ಣವರ ಆಕ್ರೋಶ ವ್ಯಕ್ತಪಡಿಸಿದರು.
“ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿಯ ವಿಷಯವನ್ನು ಪ್ರಸ್ತಾಪಿಸಿ ಬೆಂಬಲ ಸೂಚಿಸಿ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ತಮಟೆ ಚಳವಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು, ಹೋರಾಟಗಾರರು, ಕಾರ್ಯಕರ್ತರು ಇದ್ದರು.
