ಭಾರೀ ಗಾತ್ರದ ಟಿಪ್ಪರ್ ಸಂಚಾರದಿಂದ ರಸ್ತೆ ಗುಂಡಿಬಿದ್ದಿದ್ದು, ಸಾರಿಗೆ ಸಂಪರ್ಕ ಸ್ಥಗಿತಗೊಂಡಿರುವ ಪರಿಣಾಮ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ತೊಂದರೆಯಿಂಟಾಗುತ್ತಿದೆ. ಹಾಗಾಗಿ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್‌ಎಫ್‌ಐ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಶಿರಸ್ತೇದಾರ ಪಿ ಬಿ ಶಿಂಗ್ರಿ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, “ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರುದ್ರಾಪೂರ ಹಾಗೂ ಕಲ್ಲಿಗನೂರ ರಸ್ತೆ ಮಾರ್ಗವಾಗಿ ಸಂಚರಿಸುವ ಭಾರೀ ಗಾತ್ರದ ಟಿಪ್ಪರ್ ವಾಹನಗಳು ಅಪಾಯಕಾರಿಯಾಗಿ ಹಾಗೂ ಕಾನೂನು ಬಾಹಿರವಾಗಿ ಮರಳು ಮತ್ತು ಮಣ್ಣನ್ನು ಸಾಗಿಸುತ್ತಿದ್ದಾರೆ. ಇದರಿಂದ ರಸ್ತೆಗಳು ಹದಗೆಟ್ಟಿದ್ದು, ಸಾರಿಗೆ ಸಂಪರ್ಕ ಸ್ಥಗಿತಗೊಂಡಿದೆ. ಹಾಗಾಗಿ ಅಲ್ಲಿರುವ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್‌ಎಫ್‌ಎಫ್ ಜಿಲ್ಲಾ ಉಪಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ವಾಹನ ಸವಾರರು ರಾಜಾರೋಷವಾಗಿ ಮಣ್ಣು ಹಾಗೂ ಮರಳುನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿದ್ದು, ಹಗಲು ದರೋಡೆ ಮಾಡುತ್ತಿದ್ದಾರೆ. ಎಲ್ಲ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇಂತಹ ವಾಹನ ಸಂಚಾರದಿಂದ ರಸ್ತೆ ಹದಗೆಟ್ಟಿದ್ದು, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ” ಎಂದರು.
“ಸಾರಿಗೆ ಸಂಪರ್ಕ ಕಲ್ಪಿಸುವಂತೆ ಡಿಪೋ ಮ್ಯಾನೇಜರ್ ಕೇಳಿದರೆ ಅವರೂ ಕೂಡಾ ರಸ್ತೆ ಸರಿಯಿಲ್ಲ. ಹಾಗಾಗಿ ಆ ಊರಿಗೆ ಬಸ್ ಬಿಡಲು ಸಾಧ್ಯವಿಲ್ಲವೆಂದು ನಿರಾಕರಿಸುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ವಾಹನ ಸವಾರರಿಗೆ ಬೇರೆ ಮಾರ್ಗವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜತೆಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸುಗ್ರೀವಾಜ್ಞೆ ಮೂಲಕ ಕೂಡಲೇ ಒಳಮೀಸಲಾತಿ ಜಾರಿಗೆ ಡಿಎಂಎಸ್‌ಎಸ್ ಆಗ್ರಹ
ಕಲ್ಲಿಗನೂರಿನ ವಿದ್ಯಾರ್ಥಿ ಸಂಘಟನೆಯ ಮುಖಂಡ ಸುದೀಪ್ ಹುಬ್ಬಳ್ಳಿ ಮಾತನಾಡಿ, “ನಮ್ಮ ಊರಿನಿಂದ ಸುಮಾರು 50 ಮಂದಿ ವಿದ್ಯಾರ್ಥಿಗಳಿದ್ದು, ಶಿಕ್ಷಣ ಪಡೆಯಲು ನಿತ್ಯವೂ ನಗರ ಪ್ರದೇಶಕ್ಕೆ ಹೋಗಲು ಬಸ್ ವ್ಯವಸ್ಥೆ ತುಂಬಾ ಅವಶ್ಯವಾಗಿದೆ. ಹಾಗಾಗಿ ಈ ಟಿಪ್ಪರ್ ವಾಹನ ಸವಾರರಿಂದ ರಸ್ತೆ ಹದಗೆಡುತ್ತಿದೆ. ಅಪಾಯಕಾರಿ ವಾಹನ ಸಂಚಾರದಿಂದ ವಿದ್ಯಾರ್ಥಿಗಳಿಗೆ ತುಂಬಾ ಭಯವನ್ನುಂಟು ಮಾಡುತ್ತಿದೆ. ಭಾರೀ ವಾಹನಗಳ ಸಂಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕು” ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷರಾದ ಅನಿಲ ರಾಠೋಡ,ಪಧಾಧಿಕಾರಿಗಳಾದ ಮಹಾಂತೇಶ ಪೂಜಾರ, ಮುಪ್ಪಯ್ಯ ಬೆಳವನಕಿ, ಸುನಿಲ್ ರಾಠೋಡ, ಸುದೀಪ್ ಹುಬ್ಬಳ್ಳಿ ಇದ್ದರು.