ಅಕ್ರಮ ಮರಳು ಸಾಗಾಣಿಕೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತಿದೆ. ಈ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯದೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ತಮ್ಮ ಪಾಲಿಗೆ ಪ್ರಸಾದ ಎಂಬಂತೆ ಸ್ವೀಕರಿಸಿ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಕರವೇ ಸ್ವಾಭಿಮಾನಿ ಸೇನೆ ಬೆಳಗಾವಿ ವಿಭಾಗೀಯ ಅಧ್ಯಕ್ಷ ಶರಣು ಗೋಡಿ ಕಿಡಿಕಾರಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯು ಅಕ್ರಮ ಮರಳು ಸಾಗಾಣಿಕೆ ನಿಲ್ಲಿಸುವಂತೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಲಕ್ಷ್ಮೇಶ್ವರ ತಾಲ್ಲೂಕಿನ ಅಕ್ಕಿಗುಂದ, ಬಟ್ಟೂರ, ಅಮರಾಪೂರ, ಹುಲ್ಲೂರು, ಆದರಹಳ್ಳಿ, ಕೋಗನೂರ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವು ಟಿಪ್ಪರ್ ಮತ್ತು ಲಾರಿಗಳು ಒಂದೇ ಪಾಸು ಪಡೆದು ತಮಗೆ ಎಲ್ಲಿ ಬೇಕೆಂದರಲ್ಲಿ ಮರಳನ್ನು ತುಂಬಿಕೊಂಡು ಅದೇ ಪಾಸ್‌ನಲ್ಲಿ ನಾಲ್ಕು ಐದು ಟ್ರಿಪರ್ ಮರಳು ಸಾಗಾಟ ಮಾಡುತ್ತಿದ್ದಾರೆ. ಲಾರಿ ಮತ್ತು ಟಿಪ್ಪರ್ ಗಳಿಗೆ ಜಿಪಿಎಸ್ ಇದ್ದರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಕಣ್ಣು ತಪ್ಪಿಸಿ ಜಿಪಿಎಸ್ ಬಂದ್ ಮಾಡಿ ಮರಳು ಗುತ್ತಿಗೆದಾರರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಕ್ರಮದ ಜೊತೆಗೆ ಅಕ್ರಮ ಮರಳು ಸಾಗಾಣಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಕೂಡಲೇ ಈ ಎಲ್ಲಾ ಅಕ್ರಮ ಮರಳು ಗಣಿಗಾರಿಕೆಯನ್ನು ಈ ಕೂಡಲೇ ಸ್ಥಗಿತಗೊಳಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದನ್ನು ತಡೆಹಿಡಿದು ಸಂಬಂಧಪಟ್ಟ ಅಕ್ರಮ ಮರಳು ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಒಂದು ವಾರದೊಳಗೆ ಜರುಗಿಸಬೇಕು ಇಲ್ಲವಾದರೆ ನಾವು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಶರಣು ಗೋಡಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮೈನು ಮನಿಯಾರ್, ಅಕ್ಬರ್ ಬಾಗೋಡಿ, ರಫಿಕ್ ಶಿಗ್ಗಾವಿ, ನದಿಮ್ ಕುಂದಗೋಳ, ಮುಕ್ತಿಯಾರ್ ಜಮಖಂಡಿ, ನಾಸಿರ್ ಜಮಾದಾರ, ಜಾಕಿರ್ ಶಿರಹಟ್ಟಿ, ಮಹಾಂತೇಶ್ ಉಮಚಗಿ, ಯಲ್ಲಪ್ಪ ಹಂಚಗಿ, ಪ್ರವೀಣ್ ಆಚಾರಿ, ದೀಪಿಕ್ ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
