“ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಂದೆ ನಡೆಯುವ ರಾಜ್ಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟು, ಶಿಕ್ಷಣ ಕ್ಷೇತ್ರವನ್ನು ರಾಜ್ಯ ಸರ್ಕಾರ ಬಲಪಡಿಸಬೇಕು” ಎಂದು ಎಸ್ ಎಫ್ ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಒತ್ತಾಯಿಸಿದರು.
ಗದಗ ಜಿಲ್ಲೆ ರೋಣ ಪಟ್ಟಣದ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯು ರಾಜ್ಯ ಬಜೆಟ್ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಮನವಿ ಸಲ್ಲಿಸಿ ಮಾತಾಡಿದರು.
“ದೇಶದಲ್ಲಿ ಕರೋನ ನಂತರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ವ್ಯತ್ಯಾಸಗಳಾಗಿವೆ. ಎಲ್.ಕೆ.ಜಿ ಯಿಂದ ಉನ್ನತ ಶಿಕ್ಷಣದವರೆಗೆ ಅವಲೋಕಿಸಿದಾಗ ಶಿಕ್ಷಣದ ಮೇಲೆ ಗಮನಾರ್ಹ ಪರಿಣಾಮ ಆಗಿದ್ದು ಕಂಡುಬರುತ್ತದೆ. ದಿನದಿಂದ ದಿನಕ್ಕೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರನ್ನು ಮರಳಿ ಶಾಲೆಗೆ ಕರೆತರಲು ನಿರ್ಧಿಷ್ಟವಾದ ಯಾವುದೇ ಕಾರ್ಯ ಯೊಜನೆಯಿಲ್ಲ. ಇನ್ನೊಂದೆಡೆಗೆ ಸರ್ಕಾರಿ ಮತ್ತು ಮಾತೃಭಾಷೆ ಮಾಧ್ಯಮದ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುತ್ತಿರುವುದನ್ನು ಕಾಣುತ್ತೆವೆ. ಕರ್ನಾಟಕದಲ್ಲಿ ಇತ್ತಿಚೆಗೆ ಸುಮಾರು 6ಸಾವಿರಕ್ಕೂ ಅಧಿಕ ಕನ್ನಡ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಪ್ರಸ್ತಾಪಿಸಿರುವುದು ಖಂಡನಿಯ” ಎಂದರು.
ರಾಜ್ಯ ಉಪಾಧ್ಯಕ್ಷರು ಗಣೇಶ ರಾಠೋಡ ಮಾತನಾಡಿ, “ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ, ಪಠ್ಯ ಪುಸ್ತಕ, ಸಮವಸ್ತ್ರ, ಸುಸಜ್ಜಿತ ಶೌಚಾಲಯ, ಶಾಲಾ ಕಟ್ಟಡಗಳು ಹಾಗೂ ಶಿಕ್ಷಕರು ನೇಮಕ, ಆಟದ ಸಾಮಗ್ರಿಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು, ಶೆಂಗಾ ಚೆಕ್ಕೆ, ಹಾಲು ಇವುಗಳನ್ನು ಸರಿಯಾಗಿ ನಿಡದೆ ಇರುವುದರಿಂದ ಶಾಲಾ ಶಿಕ್ಷಣ ವ್ಯವಸ್ಥೆಯು ಇಂದು ಕುಂಠಿತಗೊಂಡಿದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಪೋರೇಟ್ ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆ ಮುಖ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರಗಳು ಶಿಕ್ಷಣ ಒಂದು ಸಾರ್ವತ್ರಿಕ ವ್ಯವಸ್ಥೆಯಾಗಿ ಉಳಿಸಿಕೊಳ್ಳಲು ವಿಫಲಗೊಂಡಿದೆ.” ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಫಲಶೃತಿ | ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಲೇಬಲ್ ಕಡ್ಡಾಯ
ಮನವಿ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಮುಖಂಡರು ಅನಿಲ ಆರ್, ಶರಣು ಮಾಟರಂಗಿ, ನಾಗರಾಜ, ಅಭಿಲಾಷ್ ರಾಠೋಡ ಉಪಸ್ಥಿತರಿದ್ದರು.
