2025-26ನೇ ಪ್ರಸ್ತುತ ವರ್ಷದ ನಾಲ್ಕು ಲಕ್ಷ ಕೋಟಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ಕ್ಷೇತ್ರದ ಜನೆತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಜಿಲ್ಲೆಯ ಕೃಷಿ, ಶಿಕ್ಷಣ, ಕೈಗಾರಿಕೋದ್ಯಮ, ಕುಡಿಯುವ ನೀರಿನ ಸಮಸ್ಯೆ, ಪ್ರವಾಸೋದ್ಯಮ ಸೇರಿದಂತೆ ಯಾವುದೇ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನವಾಗಲೀ ಹೊಸ ಯೋಜನೆಯಾಗಲೀ ಘೋಷಣೆ ಮಾಡಿಲ್ಲ. ಬಜೆಟ್ ಮಂಡನೆಯಲ್ಲಿ ಗದಗ ಹೆಸರು ಬೆರಳೆಣಿಕೆಯಷ್ಟು ಅಲ್ಲಲ್ಲಿ ಕಾಣಸಿಗುತ್ತದೆಯೇ ಹೊರತು ಜಿಲ್ಲೆಯ ಜನರ ನಿರೀಕ್ಷೆಗಳಂತೆ ಅನುದಾನ ಮೀಸಲು ಇಟ್ಟಿಲ್ಲ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಗದಗ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಈ ವರ್ಷದ ಬಜೆಟ್‌ನಲ್ಲಿ ಜಿಲ್ಲೆಯ ಕೃಷಿಗೆ ಸಂಬಂಧಿಸಿದ ಯಾವುದೇ ಯೋಜನೆ ಘೋಷಣೆಯಾಗದಿರುವುದು ರೈತರಲ್ಲಿ ಬೇಸರ ಮೂಡಿಸಿದೆ. ಮೆಣಸಿನಕಾಯಿ, ಜೋಳ, ಹತ್ತಿ, ಈರುಳ್ಳಿ ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಬೆಳೆಯುವ ವಾಣಿಜ್ಯ ಬೆಳೆಗಳು. ಈ ಬೆಳೆಗಳ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಹಾಗೆಯೇ ಉಳಿದಿದೆ. ಜಿಲ್ಲೆಯಲ್ಲಿ ರೈತಸ್ನೇಹಿ, ಪರಿಸರ ಸ್ನೇಹಿ ಉದ್ಯಮ ರೂಪಿಸಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವಂತಹ ಯಾವುದೇ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ಫುಡ್ ಪಾರ್ಕ್, ಜವಳಿ ಪಾರ್ಕ್ ನಿರೀಕ್ಷೆ ಹುಸಿಗೊಳಿಸಿದ್ದು, ಉದ್ಯೋಗ ಸೃಷ್ಟಿಸುವಲ್ಲಿಯೂ ಬಜೆಟ್ ಸ್ಪಷ್ಟವಾಗಿ ವಿಫಲವಾಗಿದೆ.
ಗದಗ-ಬೆಟಗೇರಿ ಅವಳಿ ನಗರಗಳಿಗೆ ಸುಮಾರು 30 ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಲಿದ್ದು, ಶಾಶ್ವತ ಪರಿಹಾರವನ್ನು ಈ ಸಾರಿಯ ಬಜೆಟ್ ನಲ್ಲಿಯೂ ಕಂಡುಕೊಳ್ಳವ ನಿಟ್ಟಿನಲ್ಲಿ ಘೋಷಣೆಯಾಗಿಲ್ಲ.
ಗದಗ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರು ಎಚ್ ಕೆ ಪಾಟೀಲರ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವು ಒಂದಾಗಿತ್ತು. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕಪ್ಪತ ಗುಡ್ಡ, ಹಾಗೂ ಮಾಗಡಿ ಪಕ್ಷಿಧಾಮ ಜಿಲ್ಲೆಯ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಬೇಕಿತ್ತು. ಜಿಲ್ಲೆಯ ಪ್ರವಾಸಿ ತಾಣಗಳ ಸಮೀಕ್ಷೆ ನಡೆಸಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅನುದಾನ ಮೊತ್ತವನ್ನು ಸರಕಾರದ ಮುಂದೆ ಇಟ್ಟಿದ್ದು ಬಜೆಟ್ ಮಂಡನೆಯಲ್ಲಿ ಘೋಷಣೆಯಾಗಲಿಲ್ಲ.
ಗದಗಿನ ಭೀಷ್ಮ ಕೆರೆಯನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಿದ ರೀತಿಯೇ ಡಂಬಳದ ಐತಿಹಾಸಿಕ ವಿಕ್ಟೋರಿಯಾ ಕೆರೆಯನ್ನು ಅಭಿವೃದ್ಧಿಪಡಿಸಿ, ಈ ಭಾಗದ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕೆಂಬುದು ಇಲ್ಲಿಯ ಪರಿಸರ ಪ್ರೇಮಿಗಳ ಬೇಡಿಕೆಯಾಗಿತ್ತು. ಆದರೆ ಈ ಕುರಿತಂತೆ ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪವಾಗದಿರುವುದು ಸ್ಥಳೀಯ ಪರಿಸರವಾದಿಗಳ ಬೇಸರಕ್ಕೆ ಕಾರಣವಾಗಿದೆ.
ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಬುದ್ಧ ವಿಹಾರ ನಿರ್ಮಾಣ ಕೂಡ ಈ ವರ್ಷವೂ ಆಗುವಂತೆ ಕಾಣಲಿಲ್ಲ. ಈ ಬೇಡಿಕೆಯನ್ನು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರಿಗೂ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಬಾರಿಯ (2024-25) ಬಜೆಟ್ ಮಂಡಿಸಿದಾಗ ಗದಗನಲ್ಲಿ ಬೌದ್ಧ ವಿಹಾರಕ್ಕೆ 2 ಕೋಟಿ ರೂ ಅನುದಾನ ನಿಗದಿ ಮಾಡಲಾಗಿತ್ತು. ಆದರೆ ಈ ಬಜೆಟ್ ನಲ್ಲಿ ಯಾಕೆ ಅನುದಾನ ನಿಗದಿ ಮಾಡಿಲ್ಲ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರಿಸಬೇಕು ಎಂದು ದಲಿತಪರ ಸಂಘಟನೆಗಳು ಒತ್ತಾಯಿಸಿವೆ.
ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಕಾರಸಾಲ ಜಾಗಕ್ಕೆ ಸಂಬಂಧಿಸಿದ ಪ್ರಾಧಿಕಾರವನ್ನು ರಾಜ್ಯಪಾಲರು ಈ ಹಿಂದೆ ತಿರಸ್ಕರಿಸಿದ್ದರು. ಆದರೆ ರಾಜ್ಯ ಸರ್ಕಾರ ಆ ಬಗ್ಗೆ ಗಮನ ಹರಿಸಿಲ್ಲ. ಅಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಿದರೆ ನಗರಸಭೆಗೂ ಉತ್ತಮ ಆದಾಯ ಬರುತ್ತದೆ ಇದಕ್ಕೂ ರಾಜ್ಯಸರ್ಕಾರ ತಣ್ಣೀರು ಎರಚಿದೆ.

ಈದಿನ ಡಾಟ್ ಕಾಮ್‌ನೊಂದಿಗೆ ಸಾಮಾಜಿಕ ಹೋರಾಟಗಾರ ಶರೀಫ್ ಬಿಳಿಯಲಿ ಮಾತನಾಡಿ, “ಪ್ರವಾಸೋದ್ಯಮ ಸಚಿವರ ತವರಲ್ಲಿ ಪ್ರವಾಸಿಗರಿಗೆ ಸಿಗದ ನೀರು, ಗೈಡ್‌ಗಳ ಕೊರತೆ, ಕಳೆದ 15 ವರ್ಷಗಳಿಂದ ಸಿಬ್ಬಂದಿ ನೇಮಕವಿಲ್ಲ. ಕೈಗಾಕೋದ್ಯಮ, ಶಿಕ್ಷಣ, ನಿರುದ್ಯೋಗ ನೀಗಿಸುವಲ್ಲಿ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ. ಜಿಲ್ಲೆಯಲ್ಲಿ ಬೌದ್ದ ವಿಹಾರದ ಕನಸು ನನಸು ಯಾವಾಗ? ಇದಕ್ಕೆ ಮೀಸಲಿಟ್ಟ ಅನುದಾನ ಬಳಕೆಯಾಗುವುದೆ? 2025-26ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿರುವ ಬಜೆಟ್ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಬಜೆಟ್ ಕುರಿತು ಈದಿನ ಡಾಟ್ ಕಾಮ್ ಜತೆ ಎಸ್ ಎಫ್ ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, “ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಮಾರಾಟದ ಸರಕಾಗಿ ನೋಡಲಾಗಿದ್ಧು, ಕಳೆದ ಬಾರಿ 12% ಹಣವನ್ನು ಮೀಸಲಿಡಲಾಗಿತ್ತು. ಆದರೆ ಈ ಬಾರಿ ಒಟ್ಟು ಬಜೆಟ್ ನ ಗಾತ್ರದಲ್ಲಿ ಕೇವಲ 10% ರಷ್ಟು ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿ ಜನಪರ, ವಿದ್ಯಾರ್ಥಿಪರ, ಅಹಿಂದ ಸರ್ಕಾರ ಎಂದು ಹೇಳಿಕೋಳ್ಳುತ್ತದೆ. ಅವೆಲ್ಲಾ ಕೇವಲ ಮತ ಬ್ಯಾಂಕಿಗಾಗಿ ಮಾತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಇದೊಂದು ಶಿಕ್ಷಣ ವಿರೋಧಿ ಬಜೆಟ್ ಆಗಿದೆ” ಎಂದರು.
ಜಿಲ್ಲೆಯಲ್ಲಿ ನೂತನ ವಸತಿ ನಿಲಯಗಳು, ಸರಕಾರಿ ನರ್ಸಿಂಗ್ ಕಾಲೇಜು ಹಾಗೂ ಸರಕಾರಿ ಕಾನೂನು ಮಹಾವಿದ್ಯಾಲಯ ಸ್ಥಾಪನೆ ಆಗಬೇಕೆಂದು ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಬಜೆಟ್ ನಲ್ಲಿ ಇವ್ಯಾವು ಘೋಷಣೆ ಆಗಿಲ್ಲ. ಕವಿ ಪಂಡಿತ್ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಕೊರತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಬಜೆಟ್ ಮಂಡನೆಯಲ್ಲಿ ಅನುದಾನದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ಮತ್ತೊಮ್ಮೆ ಅಸಮಾಧಾನವಾಗಿದೆ.
ಇದನ್ನೂ ಓದಿ: ಗದಗ | ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಸ್ನೇಹಿತರ ಸಾವು
ಈ ಬಾರಿಯ ಆಯವ್ಯಯದಲ್ಲಿ ಗದಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಪೂರಕವಾಗುವ ಅನುದಾನ ಹಾಗೂ ಹೊಸ ಯೋಜನೆಗಳ ಘೋಷಣೆಯಾಗಲಿದೆ ಎಂದು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಬಹುತೇಕ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಪಕ್ಕವಾಗಿಲ್ಲ. ಕೊಟ್ಟಿರುವ ಬೆರಳೆಣಿಕೆಯಷ್ಟು ಭರವಸೆಯನ್ನಾದರೂ ರಾಜ್ಯ ಸರ್ಕಾರ ಉಳಿಸಿಕೊಳ್ಳುವುದೇ ಎಂದು ಕಾದು ನೋಡಬೇಕು ಎನ್ನುತ್ತಾರೆ ಜಿಲ್ಲೆಯ ಜನತೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.