ನಮ್ಮ ಸಂವಿಧಾನ ಯಾರನ್ನೂ ಅಗೌರವಿಸುವಂತಹದಲ್ಲ, ಎಲ್ಲರನ್ನೂ ಗೌರವಿಸುವಂತಹದ್ದು. ಎಲ್ಲ ಧರ್ಮಿಯರನ್ನು ಗೌರವಿಸುವಂತಹದ್ದು. ಯಾರಾದರೂ ‘ಈ ಸಂವಿಧಾನ ನಮಗೆ ಗೌರವ ಕೊಟ್ಟಿಲ್ಲವೆಂದು ಹೇಳುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ದೇಶ ದ್ರೋಹವೂ ಆಗುತ್ತದೆ” ಎಂದು ಪ್ರಗತಿಪರ ಚಿಂತಕ ಬಸವರಾಜ್ ಸೂಳಿಭಾವಿ ಹೇಳಿದರು.
ಉಡುಪಿಯ ಪೇಜಾವರ ಸ್ವಾಮಿಯ ʼನಮ್ಮನ್ನು ಗೌರವಿಸುವ ಸಂವಿಧಾನ ಬರಲಿʼ ಎಂದಿರುವ ಸಂವಿಧಾನದ ವಿರುದ್ಧ ಹೇಳಿಕೆ ಖಂಡಿಸಿ ಗದಗ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ಯಾವ ಸಂವಿಧಾನ ಪ್ರತಿಯೊಬ್ಬರ ಹಕ್ಕು, ಸಮಾನತೆಯನ್ನು ಪ್ರತಿಪಾದನೆ ಮಾಡಿದೆಯೋ, ಎಲ್ಲರನ್ನು ಸಮಾನವಾಗಿ ಕಾಣಲು ಹೇಳಿದೆಯೋ ಅಂತಹ ಸಂವಿಧಾನ ಗೌರವ ಕೊಟ್ಟಿಲ್ಲವೆಂದು ಹೇಳುವುದು ನಿಜವಾಗಿಯು ದೇಶ ದ್ರೋಹವೇ ಹೌದು” ಎಂದರು.
“ಈ ದೇಶ ಸಂವಿಧಾನ ರಚನೆಯಾದ 75ನೇ ವಾರ್ಷಿಕೋತ್ಸವದ ಆಚರಣೆ ಮಾಡಿದೆ. ಈ ದೇಶಕ್ಕೆ ಸಂವಿಧಾನದಿಂದ ವಿಶೇಷ ಗೌರವ ಸಿಕ್ಕಿದೆ. ಈ ದೇಶವನ್ನು ಹಿಂದೆ ರಾಜಪ್ರಭುತ್ವ ಆಳಿದೆ, ಧರ್ಮಪ್ರಭುತ್ವ ಆಳಿದೆ. ಆದರೆ ಪ್ರಜಾಪ್ರಭುತ್ವ ಆಳ್ವಿಕೆಯನ್ನು, ಮೇಲರಿಮೆಯನ್ನು ಸಾರಿದ್ದೇ ಈ ಸಂವಿಧಾನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಈ ದೇಶ ಹೊರಳಿದೆ. ಸನಾತನ ಪ್ರಭುತ್ವದಿಂದ, ಧರ್ಮಪ್ರಭುತ್ವದಿಂದ ಆಚೆ ಬಂದು ಪ್ರಜಾಪ್ರಭುತ್ವ ಪರಿಕಲ್ಪನೆ ಕೊಟ್ಟಿದ್ದು, ಈ ದೇಶದ ಸಂವಿಧಾನ. ಇಡೀ ವಿಶ್ವದಲ್ಲಿಯೇ ನಮ್ಮ ದೇಶಕ್ಕೆ ಇಷ್ಟು ದೊಡ್ಡ ಪ್ರಜಾಪ್ರಭುತ್ವದ ಗೌರವ ಸಿಕ್ಕಿರುವುದು ಸಂವಿಧಾನದ ಮೂಲಕ” ಎಂದರು.
“ಪೇಜಾವರ ಸ್ವಾಮಿಗಳು ದೇಶದ್ರೋಹದ ಕೆಲಸ ಮಾಡಿದ್ದಾರೆ. ಸಂವಿಧಾನ ವಿರೋಧಿ ಕೆಲಸ ಮಾಡದ್ದಾರೆ. ಕೂಡಲೇ ದೇಶದ್ರೋಹಿ, ಸಂವಿಧಾನ ವಿರೋಧಿ ಎಂದು ಸರಕಾರ ಪ್ರಕರಣ ದಾಖಲಿಸಬೇಕು. ಎಲ್ಲರನ್ನು ಗೌರವಿಸುವಂತ ಸಂವಿಧಾನವನ್ನ ನಮಗೆ ಗೌರವ ಕೊಟ್ಟಿಲ್ಲ ಎಂದು ಹೇಳುವುದು ದೇಶದ್ರೋಹದ ಕೆಲಸ. ಇಂತಹ ಹೇಳಿಕೆಯನ್ನು ಪೇಜಾವರ ಸ್ವಾಮೀಜಿ ವ್ಯಕ್ತಿಯಾಗಿ ಹೇಳಿದ್ದಲ್ಲ, ಒಂದು ಸಂಸ್ಥೆಯಾಗಿ ಮಾಡಿರುವಂತಹದ್ದು. ಆ ಸಂತರ ಸಭೆಯನ್ನು ಕರೆದವರು ವಿಶ್ವ ಹಿಂದೂ ಪರಿಷತ್ ನವರು.
ಈ ದೇಶದಲ್ಲಿ ಆರ್‌ಎಸ್‌ಎಸ್ ದ್ವಿಮುಖ ನೀತಿಯನ್ನು ಮಾಡುತ್ತಿದೆ. ಈವರೆಗೂ ಬಿಜೆಪಿ ಸಂಸದರಿಂದ, ಮಂತ್ರಿಗಳಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡಿಸುವಂತ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್‌ನ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ತಿನ ರಾಷ್ಟೀಯ ಉಪಾಧ್ಯಕ್ಷ ಪೇಜಾವರ ಸ್ವಾಮೀಜಿ ಸಂತರ ಸಭೆಯೋ ರಾಜಕೀಯ ಸಭೆಯೋ ಅನುಮಾನ ಕಾಡುತ್ತಿದೆ. ಸಭೆಯಲ್ಲಿ ಪಕ್ಕಾ ರಾಜಕಾರಣಿ ಮಾತನಾಡುವಂತಹ ಭಾಷೆಯಲ್ಲಿತ್ತು. ಹಾಗಿದ್ದರೆ ಸ್ವಾಮೀಜಿ ಕೂಡಲೇ ಪೇಜಾವರ ಮಠವನ್ನು ತ್ಯಜಿಸಿ, ಪಕ್ಷಕ್ಕೆ ಸೇರಬೇಕು. ಬದಲಾಗಿ ಧಾರ್ಮಿಕ ಸ್ವಾಮೀಜಿಯಾಗಿ ಸಂವಿಧಾನ ವಿರೋಧಿಸುವ ಹೇಳಿಕೆ ಆತಂಕಕಾರಿಯಾಗಿದ್ದು, ಸಂವಿಧಾನ ಬದಲಾಯಿಸುವೆವು ಎಂಬುದಕ್ಕೆ ನೇರವಾಗಿ ಸಾಂಸ್ಥಿಕವಾಗಿ ಹೇಳಿಕೆಗಳನ್ನು ಗಮನಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೋಧಗಯಾ ಆಡಳಿತ ಹಸ್ತಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
“ಈ ರೀತಿ ಹೇಳಿಕೆ ನೀಡುವುದರ ಮೂಲಕ ಈ ದೇಶದಲ್ಲಿ ಮೇಲು ಕೀಳಿನ ಜತೆಗೆ ಮನುಸ್ಮೃತಿಯನ್ನು ಮತ್ತೆ ಪ್ರತಿಪಾದನೆ ಮಾಡುತ್ತಿದ್ದಾರೆ. ಇದು ಆರ್‌ಎಸ್‌ಎಸ್ ಅಜೆಂಡಾವಾಗಿದ್ದು, ಸಂವಿಧಾನ ನಿರಾಕರಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಬಂಡೇಳಬೇಕು. ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಸ್ವಾಮೀಜಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಬಸವರಾಜ್ ಸೂಳಿಭಾವಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮುಖಂಡ ಶೇಖಣ್ಣ ಕವಳಿಕಾಯಿ, ಡಿಎಸ್‌ಎಸ್ ಮುಖಂಡರಾದ ಬಾಲರಾಜ್ ಅರಬರ್, ಆನಂದ ಶಿಂಗಾಡಿ, ನಾಗರಾಜ್ ಗೋಕಾವಿ, ಅನಿಲ್ ಕಾಳೆ, ಪರಶು ಕಾಳೆ, ಮುತ್ತು ಬಿಳಿಯಲಿ, ಶಿವಾನಂದ ತಮ್ಮಣ್ಣವರ, ಬಸವರಾಜ್ ಪೂಜಾರ್ ಶರೀಫ್ ಬಿಳಿಯಲಿ ಇದ್ದರು.