ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಬಹುತೇಕ ಉದ್ಯಾನಗಳನ್ನು ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಹಿತ್ಯಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಕೆ ಪಾಟೀಲ್ ಅವರ ಅಪೇಕ್ಷೆಯ ಮೇರೆಗೆ ಈ ಉದ್ಯಾನಗಳಲ್ಲಿ ಜೂನ್ 18 ರಿಂದ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮ ಪುನರಾರಂಭಿಸಲಾಗಿದೆ.
ಉದ್ಯಾನವನಗಳಲ್ಲಿ ಪ್ರತಿ ಭಾನುವಾರ ಮುಂಜಾನೆ ಉದಯರಾಗ ಹಾಗೂ ಸಾಯಂಕಾಲ ಸಂಧ್ಯಾರಾಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಹಿಂದೆ ಕಾರಣಾಂತರಗಳಿಂದ ಸ್ಥಗಿತವಾದಂತಹ ಈ ಕಾರ್ಯಕ್ರಮಗಳನ್ನು ಮತ್ತೆ ಪ್ರಾರಂಭಗೊಳಿಸಲಾಗುತ್ತಿದೆ.
ಪ್ರತಿ ಭಾನುವಾರ ಮುಂಜಾನೆ 6.30 ರಿಂದ 7.30ರ ವರೆಗೆ ಉದಯರಾಗ ಹಾಗೂ ಸಾಯಂಕಾಲ 5.30 ರಿಂದ 6.30ರ ವರೆಗೆ ಸಂಧ್ಯಾರಾಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅವಳಿ ನಗರದ ಉದ್ಯಾನವನಗಳಲ್ಲಿ ನಿರಂತರವಾಗಿ ಆಯೋಜನೆ ಮಾಡಲಾಗುವುದು.
ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಕೆ ಪಾಟೀಲ್ ಅವರು ಐತಿಹಾಸಿಕ ಭೀಷ್ಮಕೆರೆ ಉದ್ಯಾನವನದಲ್ಲಿ ಭಾನುವಾರ ಸಾಯಂಕಾಲ 5.30ಕ್ಕೆ ಉದಯರಾಗ ಹಾಗೂ ಸಂಧ್ಯಾರಾಗ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಈ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತಿ ವಹಿಸುವರು.
ಭಾನುವಾರ ಸಾಯಂಕಾಲ 5.30ಕ್ಕೆ ಐತಿಹಾಸಿಕ ಭೀಷ್ಮಕೆರೆ ಉದ್ಯಾನದಲ್ಲಿ ಪೊಲೀಸ್ ಬ್ಯಾಂಡ್‍ನೊಂದಿಗೆ ನಾಡಗೀತೆ ಮೂಲಕ ಕಾರ್ಯಕ್ರಮ ಆರಂಭಿಸಿ, ಭಾವಗೀತೆ ಭಕ್ತಿಗೀತೆಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗಲಿದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ವಿದ್ಯಾರ್ಥಿಗಳಿಂದ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು
ಈ ಕಾರ್ಯಕ್ರಮಕ್ಕೆ ನಗರದ ಗಣ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರುಗಳು ಮನವಿ ಮಾಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.