ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನುತ್ತಾರೆ. ಇಂತಹ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಅಡಿಪಾಯವೇ ಮತದಾನ ಆಗಿರುತ್ತದೆ. ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯೂ ಚಲಾಯಿಸುವಲ್ಲಿ ಯಾವುದೇ ರೀತಿಯಲ್ಲಿ ಹಿಂಜರಿಯಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಬೇಕು ಎಂದು ರೋಣ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಎಸ್ ಕೆ ಇನಾಮದಾರ ಮನರೇಗಾ ಕೂಲಿಕಾರರಿಗೆ ತಿಳಿಸಿದರು.
ಗದಗ ಜಿಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಮೊದಲನೇ ದಿನದ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರಿಗೆ, ಮತದಾನದ ಮಹತ್ವವನ್ನು ಅರಿಯಲು ಹಮ್ಮಿಕೊಂಡಿದ್ದ ಸ್ವಿಪ್ ಚಟುವಟಿಕೆ ಕಾರ್ಯಕ್ರಮದಲ್ಲಿ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.
“ಪ್ರಜಾಪ್ರಭುತ್ವದಲ್ಲಿ ಮತದಾರನೇ ನಿಜವಾದ ಪ್ರಭು. ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಬೇಕೆಂದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮಗೆ ಸಂವಿಧಾನಾತ್ಮಕವಾಗಿ ದೊರೆತಿರುವ ಹಕ್ಕು. ಮೇ 7ರಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೆ ವಿವೇಚನೆಯಿಂದ ಮತ ಚಲಾಯಿಸಬೇಕು” ಎಂದರು.
“ಮತದಾನದ ಮುಖಾಂತರ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರ ಮತವು ಅಮೂಲ್ಯವಾಗಿದ್ದು, ಶೇ.100ರಷ್ಟು ಪ್ರತಿಶತ ಮತದಾನ ಗದಗ ಜಿಲ್ಲೆಯ ವಾಗ್ದಾನವಾಗಿದೆ. ಅದನ್ನು ನೀವು ಮತ ಹಾಕುವ ಮೂಲಕ ಗುರಿ ತಲುಪಲು ಪ್ರಯತ್ನ ಮಾಡೋಣ” ಎಂದರು.
ಇದೇ ಸಂದರ್ಭದಲ್ಲಿ ಮನರೇಗಾ ಯೋಜನೆಯ ಬಗ್ಗೆ ಮಾತನಾಡಿದ ಅವರು , “ಬರದ ಬವಣೆಯಲ್ಲಿ ಬೆಂದ ಬಡ ಕೂಲಿಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ಇದರಿಂದ ಗುಳೇ ಹೋಗುವುದು ತಪ್ಪುತ್ತದೆ. ಪ್ರತಿದಿನ ನೀವು ಮಾಡುವ ಕೆಲಸಕ್ಕೆ ₹349 ಸರ್ಕಾರ ಕೊಡುತ್ತದೆ. ಅದಕ್ಕೆ ತಕ್ಕ ಹಾಗೆ ಕೆಲಸ ಮಾಡಿದಾಗ ಮಾತ್ರ ಈ ಯೋಜನೆಯು ಯಶಸ್ವಿಯಾಗುತ್ತದೆ” ಎಂದರು.
ಸಹಾಯಕ ನಿರ್ದೇಶಕರು ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ, “80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತದಾನ ಜಾಗೃತಿ ಜಾಥಾದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರಣ ಎಲ್ಲರೂ ಕಡ್ಡಾಯವಾಗಿ ನಿರ್ಭೀತಿಯಿಂದ ಮತ ಚಲಾಯಿಸಿ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ನಾಯಕರದ್ದು ಭೂ ಮಾಲಿಕ ಪಕ್ಷ: ಕಿಮ್ಮನೆ ರತ್ನಾಕರ್
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಐ ಎಫ್ ಬೊದ್ಲೇಖಾನ, ತಾಂತ್ರಿಕ ಸಹಾಯಕ ಶಾಂತಾ ತಿಮರಡ್ಡಿ, ಬಿ ಎಪ್ ಟಿ ಮೌನೇಶ, ಬಿಲ್ ಕಲೆಕ್ಟರ್ ಶಿವಾನಂದ ಪೂಜಾರ, ಡಿಇಒ ಭೀಮಶಿ ಹಡಪದ, ಜಿಕೆಎಮ್ ಲಕ್ಷ್ಮಿ ಹರ್ಲಾಪೂರ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕೂಲಿ ಕಾರ್ಮಿಕರು ಇದ್ದರು.
