“ಸರಕಾರ ಕನ್ನಡ ಅನುದಾನಿತ ಶಾಲೆಗಳಿಗೆ ಅನುದಾನ ಕೊಡದ ಕಾರಣ ಕನ್ನಡ ಶಾಲೆಗಳು, ಕನ್ನಡ ಭಾಷೆ ಕ್ಷೀಣವಾಗುತ್ತಿದೆ. ಕನ್ನಡ ಶಾಲೆಗಳನ್ನು ಉಳಿಸಲು ನಾವೆಲ್ಲರೂ ಬದ್ಧರಾಗಬೇಕು” 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಒತ್ತಾಯಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಿಯ ಭಾಷಣದಲ್ಲಿ ಮಾತನಾಡಿದರು.
“ಮಾತೃ ಭಾಷೆಯಾದ ಕನ್ನಡ ಭಾಷೆ ನಶಿಸುತ್ತಿದೆ. ಕಾಸರಗೋಡು ಪ್ರದೇಶವು ಕೇರಳ ಪಾಲಾಯಿತು. ಬೆಳಗಾವಿ ಬೀದರ್ ನಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚತ್ತಿದೆ. ರಾಯಚೂರು ಭಾಗವು ತೆಲುಗು ಭಾಷಿಕರ ಪಾಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸಿ.ಎನ್. ಪಾಟೀಲ ರಚಿಸಿದ ತಾಯಿ ಭುವನೇಶ್ವರಿ ಭಾವಚಿತ್ರವೇ ಕನ್ನಡ ತಾಯಿಯ ಅಧಿಕೃತ ಭಾವಚಿತ್ರವಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿ. ಕನ್ನಡ ಸಾಹಿತ್ಯ ಸಮ್ಮೇಳನಗಳು ಸೀಮಾತೀತ ಅಂತಃಕರಣ ಉಂಟುಮಾಡುತ್ತವೆ. ಇಂಥ ಅಕ್ಷರ ಗೋಷ್ಠಿಗಳು ನಿರಂತರವಾಗಿ ಮಾಡಬೇಕು. ಅದೇ ರೀತಿ ರಾಜ್ಯದಲ್ಲಿ 1965ರಿಂದ ಸರಕಾರ ಕನ್ನಡ ಶಾಲೆ ಆರಂಭಿಸಲಾಗಿದೆ. ಆದರೆ ಸರಕಾರ ಕನ್ನಡ ಅನುದಾನಿತ ಶಾಲೆಗಳಿಗೆ ಅನುದಾನ ಕೊಡದ ಕಾರಣ ಕನ್ನಡ ಶಾಲೆಗಳು, ಕನ್ನಡ ಭಾಷೆ ಕ್ಷೀಣವಾಗುತ್ತಿದೆ” ಎಂದರು.
“ಆಧುನಿಕ ಕವಿ ಚನ್ನವೀರ ಕಣವಿ ನಿಧನರಾಗಿ ವರ್ಷಗಳೆ ಗತಿಸಿದರೂ ಅವರ ಕುರಿತಾದ ಯಾವುದೇ ಕಾರ್ಯಕ್ರಮ ಗದಗದಲ್ಲಿ ನಡೆದಿಲ್ಲ. ಎಲ್ಲಿಯ ವರೆಗೆ ಕನ್ನಡ ಸಾಹಿತ್ಯ ಶ್ರೇಷ್ಠರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುವುದಿಲ್ಲವೋ ಅಲ್ಲಿಯ ವರೆಗೆ ಹುಯಿಲಗೋಳ ನಾರಾಯಣರು ಬರೆದ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಯನ್ನೇ ಹಾಡಬೇಕು” ಎಂದರು.
‘ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಒಂಬತ್ತು ಪ್ರತಿಷ್ಠಾನಗಳಿವೆ. ನಮ್ಮಲ್ಲಿ ಒಂದು ಕೂಡ ಇಲ್ಲ. ರನ್ನ ಪ್ರತಿಷ್ಠಾನ ಅದ್ಭುತ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಚಾಮರಸನ ಬಗ್ಗೆ ಸಂಶೋಧನೆ, ಚೆನ್ನವೀರ ಕಣವಿ, ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಸ್ಥಾಪನೆ ಆಗಬೇಕಿದೆ. ಎಂದರು.
ನಮ್ಮಲ್ಲಿ ಚಾಮರಸನನ್ನು ಮುಟ್ಟುವರರಿಲ್ಲ. ಪ್ರಭುಲಿಂಗಲೀಲೆ ಧಾರ್ಮಿಕ ಕಾವ್ಯ ಅಲ್ಲ. ಯಾವುದೇ ದೇಶದವರು ಅದನ್ನು ಓದಿದರೂ ತಮ್ಮ ಬದುಕನ್ನು ಎತ್ತರಿಸಿಕೊಳ್ಳಬಹುದು. ಪ್ರತಿವರ್ಷ ಒಂದು ದಿನವಾದರೂ ವಿಚಾರ ಸಂಕಿರಣ ನಡೆಸಬೇಕು’ ಎಂದು ಪ್ರೊ. ಚಂದ್ರಶೇಖರ ವಸ್ತ್ರದ ಆಶಿಸಿದರು.
