“ಅಕ್ರಮ ಗಣಿಗಾರಿಕೆ ಕುರಿತು ಸರ್ಕಾರದ ಕ್ರಮದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ಪತ್ರಕ್ಕೆ ನಿಮ್ಮ ಪ್ರತಿಕ್ರಿಯೆ ಏನು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಬಸವರಾಜ ಬೊಮ್ಮಾಯಿಯವರು ಭಾನುವಾರ ಪ್ರಶ್ನಿಸಿದ್ದಾರೆ.
ಗದಗ ಪಟ್ಟಣದಲ್ಲಿ ಭಾನುವಾರ ಎಚ್‌ಎಸ್‌ಎಲ್ ಟೈಲ್ಸ್ ಮತ್ತು ಗ್ರಾನೈಟ್ಸ್ ಶೋ ರೂಂ ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹೆಚ್.ಕೆ.ಪಾಟೀಲ್ ಅವರು, ಗಣಿಗಾರಿಕೆಯಲ್ಲಿ ದಾಖಲಾಗಿರುವ ಸುಮಾರು ಶೇಕಡ 90 ರಷ್ಟು ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ ಎಂದು ಹೇಳಿದ್ದಾರೆ.
“ಪ್ರಸ್ತುತ ಇರುವುದು ಅವರದೇ ಕಾಂಗ್ರೆಸ್ ಸರ್ಕಾರ. ಪಾಟೀಲ್ ಕೂಡ ಸರ್ಕಾರದ ಸಂಪುಟದ ಸದಸ್ಯರು. ಈಗ, ಅವರದೇ ಸಚಿವರೊಬ್ಬರು ಎತ್ತಿರುವ ಪ್ರಕರಣಕ್ಕೆ ಸಿಎಂ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ರಾಜ್ಯದ ಜನರು ಕುತೂಹಲದಿಂದ ಕಾಯುತ್ತಿದ್ದಾರೆ” ಎಂದು ಹೇಳಿದರು.
“ವಿಶೇಷ ನ್ಯಾಯಾಲಯ ಮಾಡಬೇಕು, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಎಚ್.ಕೆ.ಪಾಟೀಲ ಹೇಳಿದ್ದಾರೆ. ಈಗಾಗಲೇ ಹಲವಾರು ಪ್ರಕರಣಗಳು ನೋಂದಣಿಯಾಗಿ ಎಸ್‌ಐಟಿ ರಚನೆ ಆಗಿದೆ. ಸಿಬಿಐ ತನಿಖೆ ನಡೆಯುತ್ತಿದೆ. ಎಸ್‌ಐಟಿ ಮುಖ್ಯಸ್ಥರ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿವೆ. ಈಗ ಯಾವ ರೀತಿ ತನಿಖೆ ಮಾಡುತ್ತಾರೆ ನೋಡೋಣ” ಎಂದು ತಿಳಿಸಿದರು.
“ಸಚಿವ ಎಚ್.ಕೆ.ಪಾಟೀಲ 2017-18ರ ಪೂರ್ವದ ಪ್ರಕರಣಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಇಡೀ ದೇಶದಲ್ಲಿ ಗಣಿಗಾರಿಕೆಯನ್ನು ಇ ಹರಾಜು ಮಾಡಬೇಕು ಅಂತ ಹೇಳಿ ಕೇಂದ್ರ ಸರ್ಕಾರ ಕಾನೂನು ಬದಲಾವಣೆ ಮಾಡಿತು. ಆದರೆ, ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡುವ ಹಿಂದಿನ ದಿವಸದಲ್ಲಿ ರಾಜ್ಯ ಸರ್ಕಾರ ತಮಗೆ ಬೇಕಾದವರಿಗೆ ಗಣಿ ಗುತ್ತಿಗೆ ನವೀಕರಣ ಮಾಡಿತ್ತು. ಅವುಗಳ ಬಗ್ಗೆಯೂ ತನಿಖೆ ಮಾಡಲು ಎಚ್.ಕೆ.ಪಾಟೀಲ ಒಪ್ಪುತ್ತಾರೆಯೇ?” ಎಂದು ಸವಾಲು ಹಾಕಿದರು.
“ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಮನೆ ಹಂಚಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಆರ್.ಪಾಟೀಲ ಹಲವಾರು ವಿಚಾರ ಎತ್ತುತ್ತಾರೆ. ಆದರೆ, ಅವರ ಮಾತಿಗೆ ಕಾಂಗ್ರೆಸ್‌ನವರು ಮರ್ಯಾದೆ ಕೊಡುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಮಾತನಾಡುವವರಿಗೆ ಕಾಂಗ್ರೆಸ್‌ನಲ್ಲಿ ಮರ್ಯಾದೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ” ಎಂದರು.
