ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿಯಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಚೋಳಿನ್ ಓಣಿಯಲ್ಲಿ ನಡೆದಿದೆ.
ಪ್ರೇಮವ್ವ ಶರಣಪ್ಪ ಚೋಳಿನ (52) ಮೃತ ಮಹಿಳೆ. ಪೂಜೆಗೆ ಹೂವು ತರಲು ಹೋಗುವ ವೇಳೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿದೆ. ನಾಯಿ ದಾಳಿಯಿಂದ ನೆಲಕ್ಕೆ ಬಿದ್ದು ಮಹಿಳೆ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತ ಸ್ಥಳೀಯರು ಗಜೇಂದ್ರಗಡ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ತಾಲ್ಲೂಕು ಆಸ್ಪತ್ರೆ ಎದುರು ಮೃತ ಮಹಿಳೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಗಜೇಂದ್ರಗಡ ಪಟ್ಟಣ ಪುರಸಭೆ (ಟಿಎಂಸಿ) ಅಧ್ಯಕ್ಷ ಸುಭಾಷ್ ಮೈಗೇರಿ ಮಾತನಾಡಿ, “ನಮ್ಮ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸೂಚನೆ ನೀಡಿದ್ದೇವೆ. ಸಂತ್ರಸ್ತರ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ನೀಡಲಿದೆ ಮತ್ತು ಶಾಸಕರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ನಿಸರ್ಗದಲ್ಲಿ ಹಬ್ಬದ ವಾತಾವರಣ ಸೃಷ್ಟಿ; ನೋಡುಗರ ಮನಸೂರೆಗೊಳಿಸುವ ಗುಲ್ ಮೊಹರ್
ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.